IND vs PAK: ಹೀಗೆ ಗೆದ್ದರೆ ಮಾತ್ರ ಭಾರತ vs ಪಾಕಿಸ್ತಾನ್ ಮತ್ತೆ ಮುಖಾಮುಖಿ
2026ರ ಟಿ20 ವಿಶ್ವಕಪ್ ಮೊದಲ ಸುತ್ತಿನ ಪಂದ್ಯಗಳು ಅಂತಿಮ ಹಂತಕ್ಕೆ ತಲುಪಿದ್ದು, ಈಗಾಗಲೇ 8 ತಂಡಗಳು ಸೂಪರ್-8 ಸುತ್ತಿಗೆ ಪ್ರವೇಶಿಸಿವೆ. 12 ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಸೂಪರ್-8 ಹಂತಕ್ಕೆ ಪ್ರವೇಶಿಸಿದ ತಂಡಗಳಲ್ಲಿ ಭಾರತ, ಸೌತ್ ಆಫ್ರಿಕಾ, ನ್ಯೂಝಿಲೆಂಡ್, ಝಿಂಬಾಬ್ವೆ, ಪಾಕಿಸ್ತಾನ್, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ಶ್ರೀಲಂಕಾ ಸೇರಿವೆ. ವಿಶೇಷವೆಂದರೆ ಗ್ರೂಪ್-ಎಯಿಂದ ಭಾರತ ಮತ್ತು ಪಾಕಿಸ್ತಾನ್ ಎರಡೂ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದಿವೆ.
ಆದರೆ ಸೂಪರ್-8 ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವುದಿಲ್ಲ. ಏಕೆಂದರೆ ಎಂಟು ತಂಡಗಳನ್ನು ಎರಡು ಗ್ರೂಪ್‌ಗಳಾಗಿ ವಿಭಜಿಸಲಾಗಿದೆ. ಗ್ರೂಪ್-1ರಲ್ಲಿ ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ತಂಡಗಳಿವೆ. ಗ್ರೂಪ್-2ರಲ್ಲಿ ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳಿವೆ. ಈ ಹಂತದಲ್ಲಿ ಪ್ರತಿಯೊಂದು ತಂಡವು ತನ್ನದೇ ಗ್ರೂಪ್‌ನ ತಂಡಗಳ ವಿರುದ್ಧ ಮಾತ್ರ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಸೂಪರ್-8 ಹಂತದಲ್ಲಿ ಇಂಡಿಯಾ-ಪಾಕ್ ಮುಖಾಮುಖಿಗೆ ಅವಕಾಶವಿಲ್ಲ.
ಆದರೂ ನಾಕೌಟ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವ ಸಾಧ್ಯತೆ ಇದೆ.
ಸೂಪರ್-8 ಹಂತದ ಪ್ರತಿ ಗ್ರೂಪ್‌ನಿಂದ ಟಾಪ್-2 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಒಂದು ವೇಳೆ ಭಾರತ ತನ್ನ ಗ್ರೂಪ್‌ನಲ್ಲಿ ಮೊದಲ ಸ್ಥಾನ ಪಡೆದು, ಪಾಕಿಸ್ತಾನ್ ತನ್ನ ಗ್ರೂಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದರೆ ಅಥವಾ ಅದರ ವಿರುದ್ಧವಾಗಿದ್ದರೂ, ಸೆಮಿಫೈನಲ್‌ನಲ್ಲಿ ಉಭಯ ತಂಡಗಳು ಎದುರಾಗಬಹುದು. ಆದರೆ ಎರಡೂ ತಂಡಗಳು ಒಂದೇ ಸ್ಥಾನ (ಮೊದಲ ಅಥವಾ ಎರಡನೇ) ಪಡೆದರೆ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವುದಿಲ್ಲ. ಅಂಥ ಸಂದರ್ಭದಲ್ಲಿ ಎರಡೂ ತಂಡಗಳು ಸೆಮಿಫೈನಲ್ ಗೆದ್ದು ಫೈನಲ್‌ಗೆ ತಲುಪಿದರೆ ಮಾತ್ರ ಮತ್ತೆ ಇಂಡೋ-ಪಾಕ್ ಕ್ರಿಕೆಟ್ ಕದನವನ್ನು ವೀಕ್ಷಿಸುವ ಅವಕಾಶ ಸಿಗಲಿದೆ.