ಕರ್ಮ ರಿಟರ್ನ್ಸ್! ವಿಶ್ವಕಪ್ ಮೇಲೆ ಕಾಲಿಟ್ಟಿದ್ದೇ ಬಂತು, ಹೆಗಲೇರಿದ ಶನಿ! ಈಗ ಟಿ20 ವಿಶ್ವಕಪ್‌ನಿಂದ ಆಸೀಸ್ ಬಹುತೇಕ ಔಟ್
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಮತ್ತೊಂದು ನಿರಾಸಾಜನಕ ಸೋಲು ಅನುಭವಿಸಿದ್ದು, ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ. ಕಳೆದ 2023ರ ಐಸಿಸಿ ಏಕದಿನ ವಿಶ್ವಕಪ್ ಜಯಿಸಿದ ಬಳಿಕ ಕಾಂಗರೂ ಪಡೆಗೆ ಐಸಿಸಿ ಟ್ರೋಫಿಗಳು ದೂರವಾಗುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಭಾರತದಲ್ಲಿ ನಡೆದ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಆಸೀಸ್, ಸಂಭ್ರಮದ ವೇಳೆ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೆ ಪೋಸ್ ನೀಡಿದ್ದದ್ದು ಭಾರಿ ವಿವಾದಕ್ಕೀಡಾಗಿತ್ತು.
ಆ ಘಟನೆಯ ಬಳಿಕ ಆಸ್ಟ್ರೇಲಿಯಾದ ಐಸಿಸಿ ಟೂರ್ನಿಗಳ ಪ್ರದರ್ಶನ ಕುಸಿತ ಕಂಡಿದೆ. 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಲಿಲ್ಲ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಸೆಮೀಸ್ ಹಂತದಲ್ಲೇ ಮುಗ್ಗರಿಸಿತು. ಸತತವಾಗಿ ಐಸಿಸಿ ಪ್ರಶಸ್ತಿ ರೇಸ್‌ನಿಂದ ಹೊರಬೀಳುತ್ತಿರುವುದು ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಿದೆ.
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ‘ಬಿ’ ಗುಂಪಿನಲ್ಲಿ ಆಸೀಸ್ ಮೂರು ಪಂದ್ಯಗಳಲ್ಲಿ ಒಂದೇ ಗೆಲುವು ದಾಖಲಿಸಿ ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ ಮೂರು ಗೆಲುವುಗಳೊಂದಿಗೆ ಸೂಪರ್-8 ಹಂತಕ್ಕೇರಿದ್ದು, ಜಿಂಬಾಬ್ವೆ ಎರಡು ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದೀಗ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಐರ್ಲೆಂಡ್ ಗೆಲ್ಲಬೇಕು ಎಂಬ ನಿರೀಕ್ಷೆಯಲ್ಲಿ ಆಸ್ಟ್ರೇಲಿಯಾ ಕಾಯುತ್ತಿದೆ. ಜಿಂಬಾಬ್ವೆ ಗೆದ್ದರೆ ಆಸೀಸ್ ಹೋರಾಟ ಗ್ರೂಪ್ ಹಂತದಲ್ಲೇ ಅಂತ್ಯವಾಗಲಿದೆ.