ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ವಿಚಾರ: 9 ನ್ಯಾಯಾಧೀಶರ ಪೀಠ 2 ವಾರಗಳ ವಿಚಾರಣೆ
ಹೊಸದಿಲ್ಲಿ: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಭೇಟಿ ನೀಡುವ ಕುರಿತು 2018ರಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ನಡೆಸಲು ಸುಪ್ರಿಂಕೋರ್ಟ್ ಒಪ್ಪಿದೆ. ಇದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಏಪ್ರಿಲ್ 7 ರಿಂದ ಏಪ್ರಿಲ್ 22 ರವರೆಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.
ಸೋಮವಾರ (ಫೆ.16) ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಾಂಚೋಲಿ ನೇತೃತ್ವದ ಪೀಠವು ಈ ವಿಷಯವನ್ನು ಒಂಬತ್ತು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿದೆ.
ಏಪ್ರಿಲ್ 7 ರಂದು ಬೆಳಿಗ್ಗೆ 10.30 ಕ್ಕೆ ವಿಚಾರಣೆ ಆರಂಭವಾಗಲಿದೆ ಎಂದು ನ್ಯಾಯಾಲಯ ಸೋಮವಾರ ಬೆಳಿಗ್ಗೆ ತಿಳಿಸಿದೆ.
ಹಿಂದಿನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ವಿಚಾರಣೆ ನಡೆಸಲಾಗುವುದು, ಅದನ್ನು ವಿರೋಧಿಸುವ ಅರ್ಜಿಗಳನ್ನು ಏಪ್ರಿಲ್ 14 ರಿಂದ ಏಪ್ರಿಲ್ 16 ರವರೆಗೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಮರು ಪ್ರತ್ಯಾರೋಪಗಳು ಯಾವುದಾದರೂ ಇದ್ದರೆ, ಅವುಗಳನ್ನು ಏಪ್ರಿಲ್ 21 ರಂದು ವಿಚಾರಣೆಗೆ ಒಳಪಡಿಸಲಾಗುವುದು ಮತ್ತು ನಂತರ ಸಲ್ಲಿಕೆಗಳನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಪೀಠ ಹೇಳಿದೆ.
ನ್ಯಾಯಪೀಠವು ಎಲ್ಲಾ ವಕೀಲರನ್ನು ಸಮಯ ವೇಳಾಪಟ್ಟಿಯನ್ನು ಪಾಲಿಸುವಂತೆ ಕೇಳಿತು. ಮಾರ್ಚ್ 14 ರಂದು ಅಥವಾ ಅದಕ್ಕೂ ಮೊದಲು ಲಿಖಿತ ಸಲ್ಲಿಕೆಗಳನ್ನು ಸಲ್ಲಿಸುವಂತೆ ಕೇಳಿತು.ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಬರಿಮಲೆ ತೀರ್ಪಿನ ಪುನರ್ ಪರಿಶೀಲನೆ ಅರ್ಜಿಗಳನ್ನು ಬೆಂಬಲಿಸುವುದಾಗಿ ಹೇಳಿದರು.
ನ್ಯಾಯಪೀಠದಿಂದ ನೇಮಕಗೊಂಡ ವಕೀಲ ಕೃಷ್ಣ ಕುಮಾರ್ ಸಿಂಗ್ ಅವರನ್ನು ಶಬರಿಮಲೆ ತೀರ್ಪಿನ ಪುನರ್ ಪರಿಶೀಲನೆಯನ್ನು ಬೆಂಬಲಿಸುವ ಪಕ್ಷಗಳಿಗೆ ನೋಡಲ್ ಕೌನ್ಸಿಲ್ ಎಂದು ಘೋಷಿಸಲಾಯಿತು. ಪುನರ್ವಿಮರ್ಶೆಯನ್ನು ವಿರೋಧಿಸುವವರಿಗೆ ಶಾಶ್ವತಿ ಪರಿ ಅವರನ್ನು ನೋಡಲ್ ಕೌನ್ಸೆಲ್ ಆಗಿ ನೇಮಿಸಲಾಯಿತು.
2019 ರಲ್ಲಿ ಸ್ಥಾಪಿಸಲಾದ ಒಂಬತ್ತು ನ್ಯಾಯಾಧೀಶರ ಹಿಂದಿನ ಪೀಠವು ಅದರ ಎಂಟು ಸದಸ್ಯರು ನಿವೃತ್ತರಾದ ಕಾರಣ ರದ್ದಾಗಿತ್ತು.
ಒಂಬತ್ತನೇ ನ್ಯಾಯಮೂರ್ತಿ ಸೂರ್ಯ ಕಾಂತ್, ಕಳೆದ ವರ್ಷ ನವೆಂಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾದರು.
ರಾಜಕೀಯ ಜಟಾಪಟಿ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆ ಯರ ಪ್ರವೇಶ ವಿಚಾರ ಭಾನುವಾರ ಮತ್ತೆ ಮುನ್ನೆಲೆಗೆ ಬಂದಿದ್ದು ಕೇರಳದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ದೇಗುಲಕ್ಕೆ ಯುವತಿಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನಿಲುವನ್ನು ಸ್ಪಷ್ಟಪಡಿಸುವಂತೆ ಆಡಳಿತಾರೂಢ ಎಲ್‌ಡಿಎಫ್ ಸರ್ಕಾರವನ್ನು ವಿರೋಧ ಪಕ್ಷಗಳು ಆಗ್ರಹಿಸಿವೆ. ಸುಪ್ರೀಂಕೋರ್r ಎದುರು ತನ್ನ ನಿಲುವನ್ನು ಪ್ರಕಟಿಸುವಂತೆ ವಿಜಯನ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿದೆ.