T20 World Cup: ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ದಿನ ಮಳೆಯಾಗುತ್ತಾ? ಇಲ್ಲಿದೆ ಹವಾಮಾನ ವರದಿ
ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವನ್ನು ನೋಡಲು ವಿಶ್ವದಾದ್ಯಂತ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಹವಾಮಾನ ಇಲಾಖೆಯ ವರದಿ ಪ್ರಕಾರ ಪಂದ್ಯ ದಿನ ಶೇಕಡಾ 90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗುವ ಲಕ್ಷಣಗಳಿದ್ದು, ಪಂದ್ಯದ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಬಂದು ಟಾಸ್ ವಿಳಂಬವಾಗುವ ಸಾಧ್ಯತೆಗಳಿವೆ. ಮಧ್ಯಂತರದಲ್ಲಿ ಬಿಸಿಲು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದರೂ, ಮತ್ತೆ ಮಳೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಇದರಿಂದ ಪಂದ್ಯಕ್ಕೆ ವ್ಯತ್ಯಯ ಉಂಟಾಗುವ ಆತಂಕ ಹೆಚ್ಚಾಗಿದೆ.
ಇನ್ನೊಂದೆಡೆ, ಈ ಪಂದ್ಯ ಗ್ರೂಪ್ ‘ಎ’ನಲ್ಲಿ ಅಗ್ರಸ್ಥಾನ ನಿರ್ಧರಿಸಲು ಮಹತ್ವದ್ದಾಗಿದೆ. ಹಿಂದಿನ ಪಂದ್ಯದಲ್ಲಿ ಟೀಂ ಇಂಡಿಯಾ 93 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಇಶಾನ್ ಕಿಶನ್ 61 ರನ್ ಗಳಿಸಿದ್ದರು. ಪವರ್ ಪ್ಲೇನಲ್ಲಿ ಭಾರತ 86 ರನ್ ಕಲೆಹಾಕಿದ್ದು, ಇದು ಟೂರ್ನಿಯ ಅತ್ಯಧಿಕ ಪವರ್ ಪ್ಲೇ ಸ್ಕೋರ್ ಆಗಿದೆ. ಪಾಕಿಸ್ತಾನ ತಂಡ ನೆಟ್ ರನ್ ರೇಟ್‌ನಲ್ಲಿ ಹಿಂದೆ ಇದ್ದರೂ, ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನ ಪಡೆಯುವ ಗುರಿ ಹೊಂದಿದೆ.