ಮಾಜಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಜಿಂಬಾಬ್ವೆ! ಆರ್‌ಸಿಬಿ ವೇಗಿ ಜಿಂಬಾಬ್ವೆ ಗೆಲುವಿನ ರೂವಾರಿ
ಕೊಲಂಬೋದಲ್ಲಿ ನಡೆದ 10ನೇ ಆವೃತ್ತಿಯ ಟಿ20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಮಾಜಿ ಚಾಂಪಿಯನ್ ಆಸ್ಟ್ರೇಲಿಯಾವನ್ನು 23 ರನ್‌ಗಳಿಂದ ಸೋಲಿಸಿ ಸ್ಮರಣೀಯ ಜಯ ಸಾಧಿಸಿದೆ. 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ್ದ ಜಿಂಬಾಬ್ವೆ, ಇದೀಗ ಮತ್ತೊಮ್ಮೆ ಅದೇ ಸಾಧನೆ ಮಾಡಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದ ಬ್ಲೆಸಿಂಗ್ ಮುಜರಬಾನಿ 4 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ 170 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು.
ಕೇವಲ 29 ರನ್ ಗಳಿಸುವಷ್ಟರಲ್ಲಿ ನಾಲ್ವರು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಔಟಾದರು. ಜೋಶ್ ಇಂಗ್ಲಿಸ್ 8 ರನ್ ಗಳಿಸಿದರೆ, ಕ್ಯಾಮರೋನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ನಾಯಕ ಟ್ರಾವಿಸ್ ಹೆಡ್ 17 ರನ್‌ಗಳಿಗೆ ಸೀಮಿತರಾದರು. ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮ್ಯಾಟ್ ರೆನ್‌ಶೋ ಐದನೇ ವಿಕೆಟ್‌ಗೆ 77 ರನ್‌ಗಳ ಜತೆಯಾಟವಾಡಿ ಆಸೆ ಮೂಡಿಸಿದರು.
ಆದರೆ 31 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್ ಔಟಾದ ನಂತರ ಆಸ್ಟ್ರೇಲಿಯಾ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಒಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೂ ಮ್ಯಾಟ್ ರೆನ್‌ಶೋ 44 ಎಸೆತಗಳಲ್ಲಿ 65 ರನ್‌ಗಳ ಹೋರಾಟದ ಇನಿಂಗ್ಸ್ ಆಡಿದರು. ಅಂತಿಮವಾಗಿ ಆಸ್ಟ್ರೇಲಿಯಾ 19.3 ಓವರ್‌ಗಳಲ್ಲಿ 146 ರನ್‌ಗಳಿಗೆ ಸರ್ವಪತನ ಕಂಡಿತು. ಬ್ಲೆಸಿಂಗ್ ಮುಜರಬಾನಿ 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.