T20 World Cup: ಸೂರ್ಯ ಪಡೆಗೆ ಸುಲಭ ಜಯದ ನಿರೀಕ್ಷೆ
ಗುರುವಾರ ಭಾರತ ತಂಡವು ನಮಿಬಿಯಾ ವಿರುದ್ಧ ಕಣಕ್ಕಿಳಿಯಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡಕ್ಕೆ ನಮಿಬಿಯಾ ಬಗ್ಗೆ ಹೆಚ್ಚಿನ ಆತಂಕ ಇಲ್ಲ. ಆದರೆ ಅಭಿಷೇಕ್ ಶರ್ಮಾ ಅವರ ಹೊಟ್ಟೆನೋವು ಇಡೀ ತಂಡದಲ್ಲಿ ಚಿಂತೆ ಮೂಡಿಸಿದೆ. ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಬುಧವಾರ ತಂಡಕ್ಕೆ ಮರಳಿದ್ದು, ಪಂದ್ಯ ಆರಂಭಕ್ಕೂ ಮುನ್ನ ಅವರ ಆಡಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಲಕ್ ವರ್ಮಾ ತಿಳಿಸಿದ್ದಾರೆ.
ಅಮೆರಿಕ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರೂ, ಸೂರ್ಯ ಅವರ ಏಕಾಂಗಿ ಹೋರಾಟದಿಂದ ತಂಡ ಗೆಲುವು ಸಾಧಿಸಿತ್ತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಅಭಿಷೇಕ್ ಆಡದಿದ್ದರೆ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ಇದೇ 15ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಫಿಟ್ ಆಗಿ ಬರುವ ನಿರೀಕ್ಷೆಯಿದೆ.
ಸಾಮರ್ಥ್ಯ ಮತ್ತು ಅನುಭವದಲ್ಲಿ ಭಾರತ ಹಾಗೂ ನಮಿಬಿಯಾ ತಂಡಗಳ ನಡುವೆ ಭಾರೀ ಅಂತರವಿದೆ. ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಭಾರತವನ್ನು ಎದುರಿಸುವುದು ಜೆರಾರ್ಡ್ ಎರಸ್‌ಮಸ್ ಬಳಗಕ್ಕೆ ಸುಲಭವಲ್ಲ. ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ವಿರುದ್ಧ ನಮಿಬಿಯಾ ಬ್ಯಾಟರ್‌ಗಳು ಎದುರಿಸುವುದು ದೊಡ್ಡ ಸವಾಲಾಗಲಿದೆ.