ರಾಜಗೀರ್, ಬಿಹಾರ: ದಿಲ್‌ಪ್ರೀತ್ ಸಿಂಗ್ ಅವರು ಹೊಡೆದ ಎರಡು ಗೋಲುಗಳ ಬಲದಿಂದ ಭಾರತ ಹಾಕಿ ತಂಡವು ಏಷ್ಯಾ ಕಪ್ ಗೆದ್ದುಕೊಂಡಿತು. ಇದರೊಂದಿಗೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಿಕೊಂಡಿತು.
ಭಾನುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವು 4–1ರಿಂದ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾದ ವಿರುದ್ಧ ಗೆದ್ದಿತು. ಇದು ಭಾರತಕ್ಕೆ ನಾಲ್ಕನೇ ಏಷ್ಯನ್ ಟ್ರೋಫಿ ಆಗಿದೆ. ಈ ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ಟ್ರೋಫಿಗಳನ್ನು ಜಯಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐದು ಬಾರಿ ಗೆದ್ದಿರುವ ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದೆ. ಭಾರತ ತಮಡವು 2003 (ಕೌಲಾಲಂಪುರ), 2007 (ಚೆನ್ನೈ) ಮತ್ತು 2017ರಲ್ಲಿ ಢಾಕಾದಲ್ಲಿ ಏಷ್ಯಾ ಕಪ್ ಜಯಿಸಿತ್ತು.