Select Location
All Locations
State
Region
City / District
ಏಕದಿನ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ: 10 ಓವರ್​ ಕಡಿತಕ್ಕೆ ಚಿಂತನೆ!

ಏಕದಿನ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ: 10 ಓವರ್​ ಕಡಿತಕ್ಕೆ ಚಿಂತನೆ!

ಟಿ20 ಲೀಗ್‌ಗಳ ಅಬ್ಬರದ ನಡುವೆ ಏಕದಿನ ಕ್ರಿಕೆಟ್‌ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಮೆಕಿನ್ಸೆ ಸಂಸ್ಥೆಯು ಐಸಿಸಿಗೆ ಕ್ರಾಂತಿಕಾರಿ ವರದಿ ಸಲ್ಲಿಸಿದೆ. 50 ಓವರ್‌ಗಳ ಪಂದ್ಯಗಳ ಅವಧಿ ಕಡಿತ ಸೇರಿದಂತೆ ಜಾಗತಿಕ ಕ್ರಿಕೆಟ್ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಈ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ವರದಿಯ ಮುಖ್ಯಾಂಶಗಳು ಈ ಕೆಳಗಿನಂತಿದೆ...

ಟಿ20 ಕ್ರಿಕೆಟ್​ನ ಅಬ್ಬರ ಹಾಗೂ ಬದಲಾಗುತ್ತಿರುವ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಹತ್ವದ ಬದಲಾವಣೆ ತರಲು ಗಂಭೀರ ಚಿಂತನೆ ನಡೆಸುತ್ತಿದೆ. ಸದ್ಯ ಚಾಲ್ತಿಯಲ್ಲಿರುವ 50 ಓವರ್‌ಗಳ ಪಂದ್ಯವನ್ನು 40 ಓವರ್‌ಗಳಿಗೆ ಕಡಿತಗೊಳಿಸುವ ಪ್ರಸ್ತಾವನೆ ಇದೀಗ ಐಸಿಸಿ ಮುಂದಿದೆ.

ಮೆಕಿನ್ಸೆ ಎಂಬ ಜಾಗತಿಕ ಸಲಹಾ ಸಂಸ್ಥೆಯ ನೇತೃತ್ವದಲ್ಲಿ ಕ್ರಿಕೆಟ್‌ನ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಐಸಿಸಿ ಇತ್ತೀಚೆಗೆ ಸುದೀರ್ಘ ಪರಿಶೀಲನೆ ನಡೆಸಿದೆ. ಈ ವೇಳೆ ಏಕದಿನ ಕ್ರಿಕೆಟ್​ ಅನ್ನು ಉಳಿಸಿಕೊಳ್ಳಬೇಕಿದ್ದರೆ ಓವರ್​ಗಳ ಕಡಿತ ಅನಿವಾರ್ಯ ಎಂಬ ಸಲಹೆಯನ್ನು ನೀಡಲಾಗಿದೆ.

ಓವರ್‌ಗಳ ಕಡಿತಕ್ಕೆ ಕಾರಣಗಳೇನು? ಟಿ20 ಕ್ರೇಝ್: 3-4 ಗಂಟೆಗಳಲ್ಲಿ ಮುಗಿಯುವ ಟಿ20 ಪಂದ್ಯಗಳಿಗೆ ಹೋಲಿಸಿದರೆ, 8 ಗಂಟೆಗಳ ಕಾಲ ನಡೆಯುವ ಏಕದಿನ ಪಂದ್ಯಗಳನ್ನು ನೋಡಲು ಪ್ರೇಕ್ಷಕರು ನಿರಾಸಕ್ತಿ ತೋರುತ್ತಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಎರಡು ಇನಿಂಗ್ಸ್​ಗಳಲ್ಲಿ 20 ಓವರ್​ಗಳನ್ನು ಕಡಿತಗೊಳಿಸಿದರೆ ಪಂದ್ಯವು ಸುಮಾರು 6 ಗಂಟೆಗಳಲ್ಲಿ ಮುಕ್ತಾಯಗೊಳ್ಳಲಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಾಗಬಹುದು ಎಂಬ ಲೆಕ್ಕಾಚಾರವಿದೆ. ಮಧ್ಯದ ಓವರ್‌ಗಳ ಬೋರಿಂಗ್: 50 ಓವರ್‌ಗಳ ಪಂದ್ಯದಲ್ಲಿ 15 ರಿಂದ 40 ಓವರ್‌ಗಳ ನಡುವಿನ ಆಟವು ಹೆಚ್ಚು ರೋಮಾಂಚನಕಾರಿಯಾಗಿ ಇರುವುದಿಲ್ಲ. ಕೇವಲ ಸಿಂಗಲ್ಸ್-ಡಬಲ್ಸ್ ತೆಗೆಯುವ ಈ ಅವಧಿಯನ್ನು ತಪ್ಪಿಸಿ, ಪಂದ್ಯವನ್ನು ಮೊದಲಿನಿಂದ ಕೊನೆಯವರೆಗೂ ಕುತೂಹಲಕಾರಿಯಾಗಿಡುವುದು ಐಸಿಸಿ ಉದ್ದೇಶವಾಗಿದೆ. ಕಾರ್ಯೋತ್ತಡ ನಿವಾರಣೆ: ಸರಣಿ ಕ್ರಿಕೆಟ್ ಪಂದ್ಯಾವಳಿಗಳಿಂದ ಆಟಗಾರರ ಮೇಲಾಗುತ್ತಿರುವ ದೈಹಿಕ ಒತ್ತಡ ಮತ್ತು ಗಾಯದ ಸಮಸ್ಯೆಗಳನ್ನು ಕಡಿಮೆ ಮಾಡಲು ಓವರ್ ಕಡಿತವು ಸಹಕಾರಿಯಾಗಲಿದೆ.

 ಐಸಿಸಿ ಮುಂದಿರುವ ಪ್ರಸ್ತಾವನೆ: ಟಿ20 ಲೀಗ್‌ಗಳ ಭರಾಟೆಯ ಮಧ್ಯೆ ಏಕದಿನ ಕ್ರಿಕೆಟ್​ಗೆ ಪ್ರೇಕ್ಷಕರ ಕೊರತೆ ಉಂಟಾಗುತ್ತಿರುವುದನ್ನು ಮನಗಂಡಿರುವ ಮೆಕಿನ್ಸೆ ಸಂಸ್ಥೆಯು, “ಏಕದಿನ ಕ್ರಿಕೆಟ್ ಅನ್ನು ಉಳಿಸಿಕೊಳ್ಳಬೇಕಿದ್ದರೆ ಕ್ರಾಂತಿಕಾರಿ ಬದಲಾವಣೆಗಳು ಅನಿವಾರ್ಯ” ಎಂದು ಎಚ್ಚರಿಸಿದೆ. ಈ ನಿಟ್ಟಿನಲ್ಲಿ ಅದು ನೀಡಿರುವ ಪ್ರಮುಖ ಸಲಹೆಗಳು ಮತ್ತು ಶಿಫಾರಸುಗಳು ಹೀಗಿವೆ:50 ಓವರ್​ಗಳ ಬದಲಿಗೆ 40 ಓವರ್​ಗಳ ಏಕದಿನ ಪಂದ್ಯಗಳನ್ನು ಆಯೋಜಿಸುವುದು. ಏಕದಿನ ವಿಶ್ವಕಪ್ ಆರಂಭವಾಗುವ 18 ತಿಂಗಳುಗಳ ಮುಂಚೆ ಮಾತ್ರ ಏಕದಿನ ಸರಣಿಗಳನ್ನು ಆಯೋಜಿಸುವುದು. ಟೆಸ್ಟ್, ಏಕದಿನ ಹಾಗೂ ಟಿ20 ಮಾದರಿಗಳಿಗೆ ಪ್ರತ್ಯೇಕ ಮತ್ತು ಕಟ್ಟುನಿಟ್ಟಾದ ಸಮಯದ ವಿಂಡೋಗಳನ್ನು ನಿಗದಿಪಡಿಸುವುದು. ಏಷ್ಯಾ ಕಪ್ ಮಾದರಿಯಲ್ಲಿ ಬೇರೆ ಬೇರೆ ಖಂಡಗಳಲ್ಲೂ ಕಾಂಟಿನೆಂಟಲ್ ಟೂರ್ನಿಗಳು ಹಾಗೂ ತ್ರಿಕೋನ ಸರಣಿಗಳನ್ನು ಉತ್ತೇಜಿಸುವುದು.

ಬದಲಾವಣೆ ಯಾವಾಗ ಜಾರಿಯಾಗಬಹುದು? ಮೆಕಿನ್ಸೆ ಸಂಸ್ಥೆಯು, “ಏಕದಿನ ಕ್ರಿಕೆಟ್ ಅನ್ನು ಉಳಿಸಿಕೊಳ್ಳಬೇಕಿದ್ದರೆ ಕ್ರಾಂತಿಕಾರಿ ಬದಲಾವಣೆಗಳು ಅನಿವಾರ್ಯ” ಎಂದು ಎಚ್ಚರಿಸಿದರೂ ಹೊಸ ನಿಯಮಗಳು 2027ರ ಏಕದಿನ ವಿಶ್ವಕಪ್​ ಮುಗಿಯುವವರೆಗೆ ಜಾರಿಗೆ ಬರುವುದಿಲ್ಲ. ಅಲ್ಲದೆ ಪ್ರಸ್ತುತ ಇರುವ ‘ಫ್ಯೂಚರ್ ಟೂರ್ಸ್ ಪ್ರೋಗ್ರಾಂ’ (FTP) ಪ್ರಕಾರ ಜಾಗತಿಕ ಕ್ರಿಕೆಟ್ ವೇಳಾಪಟ್ಟಿಯನ್ನು ಪರಿಶೀಲಿಸಿದ ಬಳಿಕವಷ್ಟೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸದ್ಯ ಮಾಹಿತಿ ಪ್ರಕಾರ, ಎಡಿನ್‌ಬರ್ಗ್‌ನಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) 12 ಪೂರ್ಣಾವಧಿ ಸದಸ್ಯ ರಾಷ್ಟ್ರಗಳ ಮುಂದೆ ಏಕದಿನ ಕ್ರಿಕೆಟ್​ನ ಬದಲಾವಣೆ ಬಗ್ಗೆಗಿನ ಪ್ರಸ್ತಾವನೆಯನ್ನು ಚರ್ಚಿಸಲಾಗುತ್ತದೆ. ಇದಾದ ಬಳಿಕವಷ್ಟೇ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.


Smacy News 6 days ago
Home Flash News