ಇರಾನ್ ಮೇಲೆ ಅಮೆರಿಕದಿಂದ ಭಾರೀ ವೈಮಾನಿಕ ದಾಳಿ: ಪರಿಸ್ಥಿತಿ ಮತ್ತೆ ಉದ್ವಿಗ್ನ!
ಟೆಹ್ರಾನ್:ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ ಆರೋಪದ ಬೆನ್ನಲ್ಲೇ ಅಮೆರಿಕ ದಕ್ಷಿಣ ಇರಾನ್‌ನ ಹಲವು ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಗೆ "ನಿರ್ಣಾಯಕ ಮತ್ತು ತಕ್ಕ ಪ್ರತ್ಯುತ್ತರ" ನೀಡುವುದಾಗಿ ಇರಾನ್ ಸೇನಾ ನಾಯಕರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿದ ಮಾಹಿತಿಯ ಪ್ರಕಾರ, ಮಂಗಳವಾರ ಆರಂಭವಾದ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಗುರಿಗಳ ಮೇಲೆ ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಲಾಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿದಿದ್ದು, ಬಳಿಕ ಪೂರ್ಣಗೊಂಡಿದೆ ಎಂದು ತಿಳಿಸಿದೆ.
ಹೊರ್ಮುಜ್ ಜಲಸಂಧಿಯ ನಿರ್ವಹಣೆ ಮತ್ತು ಭದ್ರತೆ ವಿಚಾರದಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಇರಾನ್ ಸೇನೆ ಸ್ಪಷ್ಟಪಡಿಸಿದ್ದು, ಅಮೆರಿಕದ ದಾಳಿಗೆ ಕಠಿನ ಪ್ರತಿಕ್ರಿಯೆ ನೀಡುವುದಾಗಿ ಘೋಷಿಸಿದೆ. ಇರಾನ್ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ದಕ್ಷಿಣದ ಸಿರಿಕ್ ಬಂದರು ನಗರ, ಖೆಶ್ಮ್ ದ್ವೀಪ ಹಾಗೂ ಬಂದರ್ ಅಬ್ಬಾಸ್ ಸಮೀಪದ ಪ್ರದೇಶಗಳಲ್ಲಿ ಹಲವು ಸ್ಫೋಟಗಳು ಸಂಭವಿಸಿವೆ. ಸಿರಿಕ್‌ನ ವಾಣಿಜ್ಯ ಮತ್ತು ಮೀನುಗಾರಿಕಾ ಬಂದರುಗಳ ಮೇಲೂ ಕ್ಷಿಪಣಿಗಳು ಬಿದ್ದಿರುವುದಾಗಿ ವರದಿಯಾಗಿದೆ. ಅಮೆರಿಕದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿಗಳು ತಿಳಿಸಿರುವಂತೆ, ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ನಿಗಾ ವ್ಯವಸ್ಥೆಗಳು, ಭೂಮಿಯಿಂದ ಆಕಾಶಕ್ಕೆ ಹೊಡೆಯುವ ಕ್ಷಿಪಣಿ ತಾಣಗಳು, ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ವ್ಯವಸ್ಥೆಗಳು ಹಾಗೂ ಡ್ರೋನ್ ಉಡಾವಣಾ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಸಿರಿಕ್ ವಾಣಿಜ್ಯ ಬಂದರಿನಲ್ಲಿ ಕ್ಷಿಪಣಿ ದಾಳಿಯಿಂದ ಹಾರಿದ ಅವಶೇಷಗಳು ಬಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.
ಇದೇ ವೇಳೆ, ಇರಾನ್‌ನ ಅತಿದೊಡ್ಡ ದ್ವೀಪವಾಗಿರುವ ಖೆಶ್ಮ್‌ನಲ್ಲಿ ಕನಿಷ್ಠ ಆರು ಸ್ಫೋಟಗಳು ಹಾಗೂ ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಹೊಂದಿರುವ ಸಿರಿಕ್ ಬಂದರು ಸಮೀಪ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿರುವುದಾಗಿ ಸ್ಥಳೀಯ ವರದಿಗಳು ತಿಳಿಸಿವೆ. ದಾಳಿಯ ನಂತರ ಇರಾನ್ ಸೇನೆಯಿಂದ ಅಧಿಕೃತ ಪ್ರತಿದಾಳಿ ಇನ್ನೂ ನಡೆದಿಲ್ಲ. ಈ ನಡುವೆ, ಇರಾಕ್‌ನಲ್ಲಿ ದಿವಂಗತ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ದಾಳಿಯ ಬಳಿಕ ತುರ್ತಾಗಿ ಇರಾನ್‌ಗೆ ಮರಳಿದ್ದಾರೆ ಎಂದು ವರದಿಯಾಗಿದೆ.