Vaibhav Suryavanshi: ಐಪಿಎಲ್‌ನಿಂದ ಬ್ಯಾನ್ ಆಗ್ತಾರಾ ವೈಭವ್ ಸೂರ್ಯವಂಶಿ? ರಾಜಸ್ಥಾನ್ ರಾಯಲ್ಸ್ ವಿರುದ್ಧ ಗಂಭೀರ ಆರೋಪ
ಬೆಂಗಳೂರು : ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಐಪಿಎಲ್ 2026 ರಲ್ಲಿ (IPL 2026) ತಮ್ಮ ಹೊಡಿಬಡಿ ಆಟಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಇದರ ಜೊತೆಗೆ ಕೆಲವೊಂದು ವಿವಾದಗಳನ್ನು ಸಹ ಅವರ ಬೆನ್ನಿಗೆ ಅಂಟಿಸಲಾಗುತ್ತಿದೆ. ಅವರನ್ನು ‘ವೃತ್ತಿಪರವಲ್ಲದ’ ಆಟಗಾರ ಎಂದು ಹಣೆಪಟ್ಟಿ ಕಟ್ಟುವುದರಿಂದ ಹಿಡಿದು ಅವರ ಬ್ಯಾಟ್‌ನಲ್ಲಿ AI ಚಿಪ್ ಬಳಸಿದ ಆರೋಪವನ್ನು (Rajasthan Royals) ಮಾಡುವವರೆಗೆ ಈ ಹದಿಹರೆಯದ ಆಟಗಾರನ ಮೇಲೆ ಕೆಲವೊಂದು ಅಸಹನೀಯ ಆರೋಪಗಳನ್ನು ಮಾಡಲಾಗ್ತಿದೆ.
ಈತನ್ಮಧ್ಯೆ ರಾಜಸ್ತಾನ ರಾಯಲ್ಸ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಆರೋಪದಿಂದ ವೈಭವ್ ಸೂರ್ಯವಂಶಿ ಅವರ ಐಪಿಎಲ್ ಜೀವನಕ್ಕೆ ಕಂಟಕವಾಗುವ ಸಾಧ್ಯತೆ ಇದೆ. ಕರ್ನಾಟಕ ಮೂಲದ ಸಾಮಾಜಿಕ ಕಾರ್ಯಕರ್ತ ಎಂದು ಕರೆಸಿಕೊಳ್ಳುವ ಸಿಎಂ ಶಿವಕುಮಾರ್ ನಾಯಕ್ ಎಂಬ ವ್ಯಕ್ತಿ ವೈಭವ್ ಸೂರ್ಯವಂಶಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಕಾನೂನು ಸಮರ ಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ. ಮಾಹಿತಿ ಪ್ರಕಾರ, ಶಿವಕುಮಾರ್ ನಾಯಕ್ ಎಂಬ ವ್ಯಕ್ತಿ ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ‘ಬಾಲ ಕಾರ್ಮಿಕ’ ಆರೋಪ ಹೊರಿಸಿ ಎಫ್‌ಐಆರ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದ್ದು, 15 ವರ್ಷದ ಈ ಪ್ರತಿಭಾನ್ವಿತ ಬಾಲಕ ವೈಭವ್ ಸುತ್ತ ಮತ್ತೊಂದು ವಿವಾದ ಭುಗಿಲೆದ್ದಿದೆ ಎಂದು ರಿಪಬ್ಲಿಕ್ ನ್ಯೂಸ್ ವರದಿ ಮಾಡಿದೆ.
ಕನ್ನಡ ಸುದ್ದಿ ವಾಹಿನಿಯೊಂದರ ಚರ್ಚೆಯ ಸಂದರ್ಭದಲ್ಲಿ, ವೈಭವ್ ಸೂರ್ಯವಂಶಿ ‘ಕೇವಲ ಮಗು’ ಅವನು ‘ಶೋಷಿಸಲ್ಪಡುತ್ತಿದ್ದಾರೆ’ ಎಂದು ಶಿವಕುಮಾರ್ ನಾಯಕ್ ಎಂಬ ವ್ಯಕ್ತಿ ಆರೋಪ ಮಾಡಿದ್ದಾರೆ. ‘ರಾಜಸ್ಥಾನ್ ರಾಯಲ್ಸ್‌ನ ಈ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿಯನ್ನು ಶೋಷಿಸಲಾಗುತ್ತಿದೆ. ಅವನು ಕೇವಲ 15 ವರ್ಷ ವಯಸ್ಸಿನ ಮಗು, ಆದರೆ ಅವರು ಅವನನ್ನು ವೃತ್ತಿಪರ ಕ್ರಿಕೆಟ್ ಆಡಲು ಐಪಿಎಲ್‌ಗೆ ಕರೆತಂದಿದ್ದಾರೆ. ಇದು ಬಾಲ ಕಾರ್ಮಿಕ ಪದ್ಧತಿಯಲ್ಲದೆ ಬೇರೇನೂ ಅಲ್ಲ. ಅವರು ಅಪ್ರಾಪ್ತ ಬಾಲಕನನ್ನು ಈ ರೀತಿಯ ದೊಡ್ಡ ಲೀಗ್‌ನಲ್ಲಿ ಹೇಗೆ ಆಡುವಂತೆ ಮಾಡಬಹುದು? ಈ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್ ಆಡುವ ಬದಲು ಅವನು ತನ್ನ ಅಧ್ಯಯನದತ್ತ ಗಮನ ಹರಿಸಬೇಕು, ಶಾಲೆಗೆ ಹೋಗಬೇಕು ಮತ್ತು ಶಿಕ್ಷಣವನ್ನು ಪೂರ್ಣಗೊಳಿಸಬೇಕು’ ಎಂದು ಶಿವಕುಮಾರ್ ಹೇಳಿದ್ದಾರೆ.