ಕುವೆಂಪು ವಿವಿ:ಕೋಣಂದೂರು ಲಿಂಗಪ್ಪ, ಕೆ.ವಿ ಅಕ್ಷರ ಸೇರಿ ಮೂವರಿಗೆ ಗೌರವ ಡಾಕ್ಟರೇಟ್
ಶಿವಮೊಗ್ಗ: ತೀರ್ಥಹಳ್ಳಿಯ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ ಕೆ. ವಿ. ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ ಪ್ರೊ. ಎಚ್. ಎ. ರಂಗನಾಥ್ ಇಲ್ಲಿನ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದಾರೆ. ಮೇ 6 ರಂದು ಶಂಕರಘಟ್ಟದಲ್ಲಿ ನಡೆಯಲಿರುವ ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಗಾಗಿ ಕೋಣಂದೂರು ಲಿಂಗಪ್ಪ, ರಂಗಭೂಮಿಯ ಸೇವೆಗೆ ಕೆ.ವಿ.ಅಕ್ಷರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಪ್ರೊ. ಎಚ್.ಎ.ರಂಗನಾಥ್ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.