ಶೃಂಗೇರಿ ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್‌ಗೆ ಜಯ: ವಿನ್ನಿಂಗ್ ಲೀಡ್ ಹೆಚ್ಚಿಸಿಕೊಂಡ ರಾಜೇಗೌಡ..!
ಚಿಕ್ಕಮಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ (Recount Postal Votes) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ತಮ್ಮ ಜಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮರು ಎಣಿಕೆಯ ನಂತರ ರಾಜೇಗೌಡ ಅವರ ಲೀಡ್ (ಮುನ್ನಡೆ) ಮತ್ತಷ್ಟು ಹೆಚ್ಚಾಗಿದೆ.
ಹೆಚ್ಚಾದ ರಾಜೇಗೌಡ ಅವರ ಲೀಡ್ ಈ ಹಿಂದೆ ನಡೆದಿದ್ದ ಸಾಮಾನ್ಯ ಮತ ಎಣಿಕೆಯ ವೇಳೆ ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ ಎಂಬ ಕಾರಣಕ್ಕೆ ಹೈಕೋರ್ಟ್ ನಿರ್ದೇಶನದಂತೆ ಇಂದು ಮರು ಎಣಿಕೆ ನಡೆಸಲಾಯಿತು. ಮರು ಎಣಿಕೆಯ ನಂತರ ರಾಜೇಗೌಡ ಅವರ ಲೀಡ್ 201ರಿಂದ 203ಕ್ಕೆ ಏರಿಕೆಯಾಗಿದೆ. ಅಂದರೆ ಅಂತಿಮವಾಗಿ ಅವರು 203 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಎಣಿಕೆಗೂ ಮುನ್ನ ಗದ್ದಲ ಚಿಕ್ಕಮಗಳೂರಿನ ಐಡಿಎಸ್‌ಜಿ (IDSG) ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಎಣಿಕೆ ಪ್ರಕ್ರಿಯೆ ಆರಂಭವಾಗುವ ಒಂದು ಗಂಟೆ ಮೊದಲೇ ಮತಗಳಿರುವ ಬಾಕ್ಸ್‌ನ ಸೀಲ್ ಓಪನ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದಕ್ಕೆ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಏಜೆಂಟ್‌ಗಳು ತೀವ್ರ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಈ ಬಗ್ಗೆ ಹೈಕೋರ್ಟ್‌ಗೆ ಮಾಹಿತಿ ನೀಡಲಾಗುವುದು ಎಂದು ಚುನಾವಣಾ ಅಧಿಕಾರಿಗಳು ಮನವೊಲಿಸಿದ ನಂತರ ಎಣಿಕೆ ಕಾರ್ಯ ಮುಂದುವರಿಯಿತು.