Jabalpur Boat Tragedy: ಮೃತರ ಸಂಖ್ಯೆ 9ಕ್ಕೆ ಏರಿಕೆ; 6 ಮಂದಿ ಇನ್ನೂ ನಾಪತ್ತೆ
ಜಬಲ್‌ಪುರ: ಇಲ್ಲಿನ ಬರ್ಗಿ ಅಣೆಕಟ್ಟಿನ ನರ್ಮದಾ ನದಿಯಲ್ಲಿ ಗುರುವಾರ ಸಂಜೆ ನಡೆದ ಪ್ರವಾಸಿ ಬೋಟ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ತೀವ್ರ ಶೋಧ ಕಾರ್ಯಾಚರಣೆಯ ಹೊರತಾಗಿಯೂ ಇನ್ನೂ 6 ಜನರು ನಾಪತ್ತೆಯಾಗಿದ್ದಾರೆ ಗುರುವಾರ ಸಂಜೆ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ 'ನರ್ಮದಾ ಕ್ವೀನ್' ಎಂಬ ಕ್ರೂಸ್ ಬೋಟ್ 29ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದಾಗ ಹಠಾತ್ ಚಂಡಮಾರುತ ಮತ್ತು ಬಲವಾದ ಗಾಳಿಗೆ ಸಿಲುಕಿ ಮಗುಚಿಕೊಂಡಿತ್ತು. ಈ ದುರಂತಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 9 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದರಲ್ಲಿ ದೆಹಲಿ ಮೂಲದ ತಾಯಿ ಮತ್ತು 4 ವರ್ಷದ ಮಗ ಸೇರಿದ್ದಾರೆ.
ರಕ್ಷಣಾ ಪಡೆಗಳು ಇಬ್ಬರ ಮೃತದೇಹಗಳನ್ನು ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಿರುವುದು ದುರಂತದ ತೀವ್ರತೆಯನ್ನು ತೋರಿಸುತ್ತದೆ. ನಿರ್ಲಕ್ಷ್ಯದ ಆರೋಪ: ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ಇದ್ದರೂ ಬೋಟ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು ಎಂದು ಬದುಕುಳಿದವರು ಆರೋಪಿಸಿದ್ದಾರೆ. ಅಲ್ಲದೆ, ಬೋಟ್ ಮುಳುಗುವ ಸಂದರ್ಭದಲ್ಲಿ ಮಾತ್ರ ಲೈಫ್ ಜಾಕೆಟ್‌ಗಳನ್ನು ನೀಡಲಾಗಿತ್ತು ಎಂಬ ಗಂಭೀರ ದೂರನ್ನು ಪ್ರವಾಸಿಗರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದ್ದು, ದೋಣಿಯ ಪೈಲಟ್ ಮಹೇಶ್ ಪಟೇಲ್ ಸೇರಿದಂತೆ ಮೂವರು ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ. ಅಲ್ಲದೆ, ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ವ್ಯವಸ್ಥಾಪಕರನ್ನು ವರ್ಗಾವಣೆ ಮಾಡಲಾಗಿದ್ದು, ಹೋಟೆಲ್ ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿದೆ.