ರಾಹುಲ್ ಗಾಂಧಿ, ಖರ್ಗೆ ಹೇಳಿದ್ದನ್ನು ಪ್ರಸಾದ ಎಂದು ಸ್ವೀಕರಿಸುವೆ: ಡಿ.ಕೆ.ಶಿವಕುಮಾರ್
ಬೆಂಗಳೂರು: ಕಾಂಗ್ರೆಸ್ ಪಾಳಯದ ಎರಡು ಬಣಗಳಲ್ಲಿ ನಾಯಕತ್ವದ ವಿಚಾರವಾಗಿ ಮೇಲಾಟ ನಡೆದಿದೆ. ಇದಕ್ಕೆ ಪರ್ಯಾಯವಾಗಿ ದಲಿತ ಮುಖ್ಯಮಂತ್ರಿ ಕೂಗು ಕೇಳಿಬರುತ್ತಿದೆ. ಈ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ರಾಹುಲ್ ಗಾಂಧಿ, ಖರ್ಗೆ ಅವರ ತೀರ್ಮಾನ ನನಗೆ ಪ್ರಸಾದ’ ಎಂದು ಹೇಳಿದ್ದಾರೆ. ಈ ಮೊದಲು ‘ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲವಾಗದು. ಶ್ರಮಕ್ಕೆ ಯಾವಾಗಲೂ ಫಲ ಇದ್ದೇ ಇರುತ್ತದೆ’ ಎಂದು ಹೇಳುತ್ತಿದ್ದರು. ಹಾಗಂತ, ಪ್ರಯತ್ನ ಕೈಬಿಟ್ಟಿಲ್ಲ. ವಾರದ ಹಿಂದಷ್ಟೇ ಸಹೋದರನೊಂದಿಗೆ ದೆಹಲಿ ಕಂಡುಬಂದಿದ್ದಾರೆ. ಮತ್ತೊಂದೆಡೆ ಅವರದ್ದೇ ಬಣದಿಂದ ನಾಯಕತ್ವ ಬದಲಾವಣೆ ಕೂಗು ಕೇಳುತ್ತಿದೆ. ಈ ಮಧ್ಯೆ ಎದುರಾಳಿ ಬಣ ‘ದಲಿತ ಸಿಎಂ’ ದಾಳ ಉರುಳಿಸಿದೆ.
ಇದಕ್ಕೆ ಪೂರಕವಾಗಿ ಸಾಮಾನ್ಯವಾಗಿ ದಲಿತ ಸಿಎಂ ಅದರಲ್ಲೂ ತಮ್ಮ ರೀ-ಎಂಟ್ರಿಯನ್ನು ತಳ್ಳಿಹಾಕುತ್ತಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ತೀರ್ಮಾನ ಏನೇ ಇದ್ದರೂ ಸ್ವೀಕರಿಸುವುದಾಗಿ ಹೇಳಿದ್ದಾರೆ. ಇದು ಡಿಸಿಎಂ ಬಣವನ್ನು ತುಸು ಇಕ್ಕಟ್ಟಿಗೆ ಸಿಲುಕಿಸಿದಂತಿದೆ. ಹಾಗಾಗಿಯೇ ‘ಖರ್ಗೆ ತೀರ್ಮಾನವನ್ನು ಪ್ರಸಾದವಾಗಿ ಸ್ವೀಕರಿಸುವುದಾಗಿ’ ಡಿಸಿಎಂ ತಿಳಿಸಿದ್ದಾರೆ. ಇದು ಪಕ್ಷದ ವಲಯದಲ್ಲಿ ಹೊಸ ರೀತಿಯ ವಿಶ್ಲೇಷಣೆಗೆ ಎಡೆಮಾಡಿಕೊಟ್ಟಿದೆ. ಕೆಪಿಸಿಸಿ ಕಚೇರಿ ಆವರಣದಲ್ಲಿ ಶುಕ್ರವಾರ ಎಐಸಿಸಿ ಅಧ್ಯಕ್ಷರು ಪಕ್ಷದ ತೀರ್ಮಾನ ಏನೇ ಇದ್ದರೂ ಸ್ವೀಕರಿಸಬೇಕು ಎಂದಿರುವ ಬಗ್ಗೆ ಕೇಳಿದಾಗ, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ತೀರ್ಮಾನವನ್ನು ಪ್ರಸಾದವೆಂದು ಸ್ವೀಕರಿಸುತ್ತೇವೆ’ ಸ್ಪಷ್ಟಪಡಿಸಿದರು. ಬಳಿಕ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೈಕಮಾಂಡ್ ಭೇಟಿ ಬಗ್ಗೆ ಕೇಳಿದಾಗ, ‘ನಿಮಗೆ ರಾಜಕೀಯ ಬಿಟ್ಟರೆ ಬೇರೆ ಏನೂ ಇಲ್ಲವೇ? ಅದಕ್ಕೆಲ್ಲ ಮುಹೂರ್ತವಿದೆ ಬಿಡಿ’ ಎಂದಷ್ಟೇ ಹೇಳಿದರು.