Select Location
All Locations
State
Region
City / District
ಮೈಸೂರು ಸ್ಯಾಂಡಲ್ 110 ವರ್ಷಗಳಲ್ಲಿ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು, 507 ಕೋಟಿ ಲಾಭ!

ಮೈಸೂರು ಸ್ಯಾಂಡಲ್ 110 ವರ್ಷಗಳಲ್ಲಿ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು, 507 ಕೋಟಿ ಲಾಭ!

ಬೆಂಗಳೂರು (ಏ.28): ಕರ್ನಾಟಕದ ಹೆಮ್ಮೆಯ ಸಾರ್ವಜನಿಕ ಉದ್ದಿಮೆ 'ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ' (ಕೆ.ಎಸ್.ಡಿ.ಎಲ್) ಸಾಧನೆಯ ಶಿಖರಕ್ಕೇರಿದೆ. 110 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ಸಂಸ್ಥೆಯು 2025-26ನೇ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ 2,016 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಮಂಗಳವಾರ ಈ ಐತಿಹಾಸಿಕ ಅಂಕಿಅಂಶಗಳನ್ನು ಬಿಡುಗಡೆ ಮಾಡಿ, ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ನಾಲ್ಕು ವರ್ಷಗಳಲ್ಲಿ ಡಬಲ್ ಸಾಧನೆ! ಒಂದು ಕಾಲದಲ್ಲಿ ಮಂದಗತಿಯಲ್ಲಿದ್ದ ಕೆ.ಎಸ್.ಡಿ.ಎಲ್, ಕಳೆದ ಕೆಲವು ವರ್ಷಗಳಲ್ಲಿ ಅಸಾಧಾರಣ ವೇಗ ಪಡೆದುಕೊಂಡಿದೆ. ಸಂಸ್ಥೆಯು ಮೊದಲ ಒಂದು ಸಾವಿರ ಕೋಟಿ ರೂ.ಗಳ ವಹಿವಾಟನ್ನು ತಲುಪಲು ಬರೋಬ್ಬರಿ 105 ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ ಮುಂದಿನ 1,000 ಕೋಟಿ ರೂ.ಗಳನ್ನು (ಅಂದರೆ 2,000 ಕೋಟಿ ಮಟ್ಟ ತಲುಪಲು) ಕೇವಲ ನಾಲ್ಕು ವರ್ಷಗಳಲ್ಲಿ ಸಾಧಿಸಿದೆ. ವಿಶೇಷವೆಂದರೆ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ ವಹಿವಾಟು 641 ಕೋಟಿ ರೂ.ಗಳಷ್ಟು ಏರಿಕೆ ಕಂಡು 2,016 ಕೋಟಿ ರೂ. ತಲುಪಿದೆ. 

ಈ ಮೂಲಕ ಸಂಸ್ಥೆಯು 507 ಕೋಟಿ ರೂ.ಗಳ ಬೃಹತ್ ಲಾಭ ಗಳಿಸಿದೆ. ಉತ್ಪನ್ನಗಳ ವೈವಿಧ್ಯತೆ ಮತ್ತು ಉತ್ಪಾದನಾ ಸಾಮರ್ಥ್ಯ: ಸಚಿವ ಎಂ.ಬಿ. ಪಾಟೀಲ ಅವರು ಮಾಹಿತಿ ನೀಡಿದಂತೆ, ಮೂರು ವರ್ಷಗಳ ಹಿಂದೆ ಸಂಸ್ಥೆಯು ಕೇವಲ 34 ಉತ್ಪನ್ನಗಳನ್ನು ಹೊಂದಿತ್ತು. ಇಂದು ಆ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಹೊಸ ನೇಮಕಾತಿ ಅಥವಾ ಅತಿಯಾದ ಯಂತ್ರೋಪಕರಣಗಳ ವೆಚ್ಚವಿಲ್ಲದೆಯೇ ಕೇವಲ ದಕ್ಷ ಕಾರ್ಯವಿಧಾನದ ಮೂಲಕ 26 ಸಾವಿರ ಮೆಟ್ರಿಕ್ ಟನ್ ಇದ್ದ ಉತ್ಪಾದನಾ ಸಾಮರ್ಥ್ಯವನ್ನು 47 ಸಾವಿರ ಮೆಟ್ರಿಕ್ ಟನ್ ಗೆ ಹೆಚ್ಚಿಸಲಾಗಿದೆ. ಗಳಿಸಿದ ಲಾಭದಲ್ಲಿ 157 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಲಾಭಾಂಶವಾಗಿ (Dividend) ಹಾಗೂ 5 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಲಾಗುವುದು.

ಡಿಜಿಟಲ್ ಮತ್ತು ಆಧುನಿಕ ವ್ಯಾಪಾರದಲ್ಲಿ ಮುಂಚೂಣಿ: ಸಂಪ್ರದಾಯಿಕ ಮಾರುಕಟ್ಟೆಗೆ ಸೀಮಿತವಾಗಿದ್ದ ಕೆ.ಎಸ್.ಡಿ.ಎಲ್ ಈಗ ಇ-ಕಾಮರ್ಸ್ ಮತ್ತು ಆಧುನಿಕ ವ್ಯಾಪಾರ ವಹಿವಾಟಿನಲ್ಲೂ ಧೂಳೆಬ್ಬಿಸಿದೆ. 2025-26ನೇ ಸಾಲಿನಲ್ಲಿ ಆಧುನಿಕ ವ್ಯಾಪಾರದಲ್ಲಿ 420 ಕೋಟಿ ರೂ. ಮತ್ತು ಇ-ಕಾಮರ್ಸ್ ಮೂಲಕ 120 ಕೋಟಿ ರೂ. ಆದಾಯ ಬಂದಿದೆ. ಮುಂದಿನ ಗುರಿ ಇನ್ನಷ್ಟು ದೊಡ್ಡದಾಗಿದೆ; 2028ರ ವೇಳೆಗೆ 3 ಸಾವಿರ ಕೋಟಿ ರೂ. ಮತ್ತು 2030ರ ವೇಳೆಗೆ 5 ಸಾವಿರ ಕೋಟಿ ರೂ. ವಹಿವಾಟಿನ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ವಿಜಯಪುರದಲ್ಲಿ 229 ಕೋಟಿ ರೂ. ವೆಚ್ಚದಲ್ಲಿ ನೂತನ ಉತ್ಪಾದನಾ ಘಟಕ ಆರಂಭವಾಗಲಿದೆ. ರೈತರ ಪರ 'ಗ್ರೋ ಮೋರ್ ಸ್ಯಾಂಡಲ್' ಅಭಿಯಾನ: ಶ್ರೀಗಂಧದ ಎಣ್ಣೆಯ ಸುಗಮ ಪೂರೈಕೆಗಾಗಿ ಕೆ.ಎಸ್.ಡಿ.ಎಲ್ ರೈತರ ಜೊತೆ ಕೈಜೋಡಿಸಿದೆ. 

'ಗ್ರೋ ಮೋರ್ ಸ್ಯಾಂಡಲ್' ಯೋಜನೆಯಡಿ 10 ಸಾವಿರ ಎಕರೆ ಗಂಧದ ನೆಡುತೋಪು ಬೆಳೆಸಲು ಗುರಿ ಹೊಂದಲಾಗಿದ್ದು, ಪ್ರತಿ ಗಿಡಕ್ಕೆ 500 ರೂ. ಪ್ರೋತ್ಸಾಹಧನ ನೀಡಲಾಗುವುದು. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ರೈತರಿಂದಲೇ ನೇರವಾಗಿ 174 ಟನ್ ಗಂಧ ಖರೀದಿಸಿ 6.08 ಕೋಟಿ ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲಾಗಿದೆ. ಸಿಬ್ಬಂದಿಗಳಿಗೆ ಗೌರವ ಸನ್ಮಾನ: ನಗರದ ಖಾಸಗಿ ಹೋಟೆಲಿನಲ್ಲಿ ನಡೆದ 'ಮೈಸೂರು ಸ್ಯಾಂಡಲ್ ನ ಸಾಧನೆಯ ಶಿಖರ' ಕಾರ್ಯಕ್ರಮದಲ್ಲಿ ಈ ಯಶಸ್ಸಿಗೆ ಕಾರಣರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಪಿಕೆಎಂ ಪ್ರಶಾಂತ್ ಅವರ ನಾಯಕತ್ವದಲ್ಲಿ ಕೆ.ಎಸ್.ಡಿ.ಎಲ್ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಆಸ್ಟ್ರೇಲಿಯಾ ಮತ್ತು ಯುಎಇ (UAE) ಮಾರುಕಟ್ಟೆಗಳಿಗೂ ಮೈಸೂರು ಸ್ಯಾಂಡಲ್ ಸೋಪು ಮತ್ತು ಸೌಂದರ್ಯವರ್ಧಕಗಳನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.


Asianet News 1 hour ago
Home Flash News