ಅಮೆರಿಕಾದಲ್ಲಿ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಎಂದ ನಟ ಮೋಹನ್‌ಲಾಲ್
ಕರ್ನಾಟಕದ ಪಾಲಿಗೆ ಇಂದು ಕೇವಲ ದಿನಾಂಕವಲ್ಲ, ಅದೊಂದು ಭಾವನೆ. ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ (Dr Rajkumar) ಅವರ ಜನ್ಮದಿನದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದೆ. ಸಮಾಜಕ್ಕೆ ಮಾದರಿಯಾಗುವಂತಹ ಪಾತ್ರಗಳ ಮೂಲಕ ಮನೆಮಾತಾಗಿದ್ದ ಅಣ್ಣಾವ್ರನ್ನು ನೆನೆಯದ ಕನ್ನಡಿಗನಿಲ್ಲ. ಆದರೆ, ಈ ವಿಶೇಷ ದಿನದಂದು ಮಲಯಾಳಂ ಚಿತ್ರರಂಗದ 'ಕಂಪ್ಲೀಟ್ ಆಕ್ಟರ್' ಮೋಹನ್ ಲಾಲ್ (Mohanlal) ಅವರು ನೀಡಿರುವ ಒಂದು ಸರ್ಪ್ರೈಸ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ! ವೈರಲ್ ಆಯ್ತು ಮೋಹನ್ ಲಾಲ್ ಧ್ವನಿಯಲ್ಲಿನ 'ಅಣ್ಣಾವ್ರ' .
ಗೀತೆ: ಇತ್ತೀಚೆಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಅಮೆರಿಕಾ ಪ್ರವಾಸದಲ್ಲಿದ್ದರು. ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮದೇ ಸೂಪರ್ ಹಿಟ್ ಚಿತ್ರ 'ನಾರನ್'ನ 'ವೇಲ್ ಮುರುಗ' ಹಾಡನ್ನು ಹಾಡಿ ಅಭಿಮಾನಿಗಳನ್ನು ರಂಜಿಸಿದ್ದರು. ಆದರೆ, ಅಣ್ಣಾವ್ರ ಹುಟ್ಟುಹಬ್ಬದ ಈ ಶುಭ ಸಂದರ್ಭದಲ್ಲಿ, ಮೋಹನ್ ಲಾಲ್ ಅವರು ಡಾ. ರಾಜ್‌ಕುಮಾರ್ ಅವರ ಸಾರ್ವಕಾಲಿಕ ಶ್ರೇಷ್ಠ ಮೆಲೋಡಿ ಹಾಡು 'ಎಂದೆಂದೂ ನಿನ್ನನು ಮರೆತು' ಗೀತೆಯನ್ನು ಗುನುಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಈ ವಿಡಿಯೋ ನೋಡಿದ ರಾಜ್ ಅಭಿಮಾನಿಗಳು ಮಲಯಾಳಂ ನಟನ ಕನ್ನಡ ಪ್ರೇಮಕ್ಕೆ ಫಿದಾ ಆಗಿದ್ದಾರೆ.
ಮೋಹನ್ ಲಾಲ್ ಅವರಿಗೆ ಕನ್ನಡ ಚಿತ್ರರಂಗ ಮತ್ತು ಡಾ. ರಾಜ್‌ಕುಮಾರ್ ಕುಟುಂಬದ ಮೇಲೆ ಅಪಾರ ಗೌರವವಿದೆ. ಈ ಹಿಂದೆ ಅವರು ಬಿ.ಎಂ. ಗಿರಿರಾಜ್ ನಿರ್ದೇಶನದ 'ಮೈತ್ರಿ' ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಆ ಸಮಯದಲ್ಲಿ ಅವರು, "ನನಗೆ ಡಾ. ರಾಜ್‌ಕುಮಾರ್ ಸರ್ ಅವರೊಂದಿಗೆ ನಟಿಸುವ ದೊಡ್ಡ ಆಸೆ ಇತ್ತು. ಅವರು ನನಗೆ ಅತ್ಯಂತ ಆತ್ಮೀಯರಾಗಿದ್ದರು" ಎಂದು ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದರು. ಇಂದು ಅಣ್ಣಾವ್ರ ಹಾಡನ್ನು ಹಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದ್ದಾರೆ.
ಎವರ್‌ಗ್ರೀನ್ 'ಎರಡು ಕನಸು' ಚಿತ್ರದ ಈ ಹಾಡು: ರಾಜನ್-ನಾಗೇಂದ್ರ ಅವರ ಮಧುರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ‘ಎಂದೆಂದೂ ನಿನ್ನನು ಮರೆತು..’ ಹಾಡು ಇಂದಿಗೂ ಪ್ರೇಮಿಗಳ ಫೇವರಿಟ್. 1974ರಲ್ಲಿ ಬಿಡುಗಡೆಯಾದ ‘ಎರಡು ಕನಸು’ ಸಿನಿಮಾದ ಈ ಹಾಡಿಗೆ ಗಾನಗಂಧರ್ವ ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಅವರು ಧ್ವನಿ ನೀಡಿದ್ದರು. ಈ ಮಾಂತ್ರಿಕ ಗೀತೆಯನ್ನು ಮೋಹನ್ ಲಾಲ್ ಧ್ವನಿಯಲ್ಲಿ ಕೇಳುವುದು ಕನ್ನಡಿಗರಿಗೆ ಒಂದು ಹಬ್ಬವೇ ಸರಿ.
ಇನ್ನು ಮೋಹನ್ ಲಾಲ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಈ ವರ್ಷ ಅವರು ಸಖತ್ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಬರೋಬ್ಬರಿ 5 ದೊಡ್ಡ ಸಿನಿಮಾಗಳಿವೆ. ಮಲಯಾಳಂನ ಮತ್ತೊಬ್ಬ ದಿಗ್ಗಜ ನಟ ಮಮ್ಮುಟ್ಟಿ ಅವರೊಂದಿಗೆ ನಟಿಸಿರುವ 'ಪೆಟ್ರಿಯಾಟ್' ಸಿನಿಮಾ ಮೇ 1ರಂದು ತೆರೆಗೆ ಬರಲು ಸಜ್ಜಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿರುವ 'ದೃಶ್ಯಂ- 3' ಸಿನಿಮಾದ ಅಪ್‌ಡೇಟ್ ಸಿಕ್ಕಿದ್ದು, ಮೇ 21ರಂದು ಈ ಬಹುನಿರೀಕ್ಷಿತ ಚಿತ್ರ ಬಿಡುಗಡೆ ಆಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಅಣ್ಣಾವ್ರ ಜನ್ಮದಿನದಂದು ಮೋಹನ್ ಲಾಲ್ ಅವರು ನೀಡಿರುವ ಈ 'ಮ್ಯೂಸಿಕಲ್ ಟ್ರಿಬ್ಯೂಟ್' ಎರಡು ಭಾಷೆಗಳ ಚಿತ್ರರಂಗದ ನಡುವಿನ ಬಾಂಧವ್ಯವನ್ನು ಎತ್ತಿ ಹಿಡಿದಿದೆ.