Select Location
All Locations
State
Region
City / District
ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ: ಪೊಲೀಸ್ ಕಮಿಷನರ್ ಹೇಳಿದ್ದೇನು ನೋಡಿ

ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ: ಪೊಲೀಸ್ ಕಮಿಷನರ್ ಹೇಳಿದ್ದೇನು ನೋಡಿ

ಹುಬ್ಬಳ್ಳಿ, ಏಪ್ರಿಲ್ 24: ಮೊಬೈಲ್ ಗೇಮ್‌ಗೆ (Mobile Game) ದಾಸನಾಗಿದ್ದ ಬಾಲಕನೊಬ್ಬ ತಾಯಿ ಫೋನ್ ಕಿತ್ತುಕೊಂಡಿದ್ದಕ್ಕೆ ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ಹುಬ್ಬಳ್ಳಿಯ ಉದಯನಗರದಲ್ಲಿ ನಡೆದಿದೆ. 14 ವರ್ಷದ ಸಮರ್ಥ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಉದಯನಗರದ ನಿವಾಸಿಯಾದ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ (Free Fire) ನಂತಹ ಆನ್‌ಲೈನ್ ಗೇಮ್‌ಗಳಿಗೆ ವಿಪರೀತ ಅಡಿಕ್ಟ್ ಆಗಿದ್ದ. ಗುರುವಾರ ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ‘ಮೊಬೈಲ್ ಸಾಕು ಮಾಡು, ಓದಿಕೊಳ್ಳುವ ಕಡೆ ಗಮನ ಕೊಡು’ ಎಂದು ಹೇಳಿ ಆತನ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. 

ಇದರಿಂದ ತೀವ್ರವಾಗಿ ನೊಂದ ಸಮರ್ಥ್, ತಕ್ಷಣ ತನ್ನ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಸುಮಾರು 15-20 ನಿಮಿಷಗಳಾದರೂ ಬಾಲಕ ಹೊರಬಾರದಿದ್ದಾಗ ಆತಂಕಗೊಂಡ ತಂದೆ, ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಈ ವೇಳೆ ಮಗ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಬಾಗಿಲು ಮುರಿದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಇದು ಅತ್ಯಂತ ದುರದೃಷ್ಟಕರ ಘಟನೆ. ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಮಕ್ಕಳು ಮೊಬೈಲ್ ಅಡಿಕ್ಷನ್‌ಗೆ ಒಳಗಾದಾಗ ಪೋಷಕರನ್ನೇ ಬ್ಲ್ಯಾಕ್‌ಮೇಲ್ ಮಾಡುವ ಹಂತಕ್ಕೆ ತಲುಪುತ್ತಾರೆ. ಒಂದು ವೇಳೆ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್ ಆಗಿದ್ದರೆ, ಏಕಾಏಕಿ ಮೊಬೈಲ್‌ನಿಂದ ದೂರವಿಡಲು ಪ್ರಯತ್ನಿಸಬಾರದು. ಬದಲಾಗಿ, ಅವರ ಶಿಕ್ಷಕರು ಅಥವಾ ಮಕ್ಕಳ ತಜ್ಞರ ಜೊತೆ ಸಮಾಲೋಚಿಸಿ, ನಿಧಾನವಾಗಿ ಈ ವ್ಯಸನದಿಂದ ಹೊರಬರುವಂತೆ ಮಾಡಬೇಕು.ಎಂದು ಕಿವಿಮಾತು ಹೇಳಿದ್ದಾರೆ.


TV9 Kannada 1 hour ago
Home Flash News