Explainer: ಪಟಾಕಿ ಕಾರ್ಖಾನೆಗಳ ಸ್ಫೋಟಕ್ಕೆ ಕಾರಣಗಳು ಮತ್ತು ಸುರಕ್ಷತಾ ಕ್ರಮಗಳು
ಭಾರತದಲ್ಲಿ ಪಟಾಕಿ ತಯಾರಿಕೆ ಒಂದು ದೊಡ್ಡ ಉದ್ಯಮವಾಗಿದೆ. ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣ ಹಾಗೂ ರಾಜ್ಯದಲ್ಲಿ ಕೆಲವು ಭಾಗಗಳಲ್ಲಿ ಪಟಾಕಿ ತಯಾರಿಸಲಾಗುತ್ತದೆ.ಈ ಉದ್ಯಮ ದಕ್ಷಿಣ ಭಾರತದಲ್ಲಿ ಹೆಚ್ಚು ವ್ಯಾಪ್ತಿಯನ್ನು ಹೊಂದಿದ್ದು ತಮಿಳುನಾಡಿನ ಶಿವಕಾಶಿ ಪಟಾಕಿ ತಯಾರಿಕೆಗೆ ಖ್ಯಾತಿ ಪಡೆದಿದೆ. ಇತ್ತೀಚೆಗೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಕಟ್ಟಾನಿಪಟ್ಟಿ ಎಂಬಲ್ಲಿ ಭಾನುವಾರ ಸಂಭವಿಸಿದ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 23 ಕಾರ್ಮಿಕರು ಮೃತಪಟ್ಟಿದ್ದರು. ಕೇರಳದ ತ್ರಿಶೂರ್‌ನಲ್ಲಿರುವ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಮಂಗಳವಾರ (ಏಪ್ರಿಲ್ 21) ಸಂಭವಿಸಿದ ಅವಘಡದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದರು.
ಪ್ರತಿವರ್ಷ ಒಂದಿಲ್ಲೊಂದು ಕಾರ್ಖಾನೆಯಲ್ಲಿ ಇಂತಹ ಸ್ಫೋಟಗಳು ಸಂಭವಿಸುತ್ತಿರುತ್ತವೆ. ಆಗಾಗ್ಗೆ ಸಂಭವಿಸುವ ಈ ಸ್ಫೋಟಗಳು ಆತಂಕಕಾರಿಯಾಗಿದ್ದು. ಸ್ಫೋಟಗಳಿಗೆ ಕಾರಣಗಳೇನು? ಹಾಗೂ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳೇನು? ಎಂಬುದರ ವಿಸ್ತೃತ ಮಾಹಿತಿ ಇಲ್ಲಿದೆ. ಕಳೆದ ಒಂದು ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕೆಲವು ಭೀಕರ ಪಟಾಕಿ ದುರಂತಗಳ ಸಂಭವಿಸಿವೆ. ಈ ಸ್ಫೋಟದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ತಮಿಳುನಾಡಿನ ಶಿವಕಾಶಿಯಲ್ಲಿ ಪ್ರತಿ ವರ್ಷವೂ ಸಣ್ಣಪುಟ್ಟ ಮತ್ತು ಮಧ್ಯಮ ಪ್ರಮಾಣದ ಸ್ಫೋಟಗಳು ವರದಿಯಾಗುತ್ತಲೇ ಇರುತ್ತವೆ. ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ 25 ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಘಟನೆ 2017ರಲ್ಲಿ ನಡೆದಿತ್ತು.
2018ರಲ್ಲಿ ದೆಹಲಿಯ ಮುಂಡ್ಕಾ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ 17 ಜನರು ಮೃತಪಟ್ಟಿದ್ದರು. ಪಂಜಾಬ್‌ನ ಗುರುದಾಸಪುರದಲ್ಲಿ 2019ರಲ್ಲಿ ಸ್ಫೋಟ ಸಂಭವಿಸಿ 23 ಜನರು ಮೃತಪಟ್ಟಿದ್ದರು. ತಮಿಳುನಾಡಿನ ವಿರುಧನಗರದ ಪಟಾಕಿ ಘಟಕಗಳಲ್ಲಿ 2020 ಮತ್ತು 2023ರಲ್ಲಿ ಸ್ಫೋಟ ಸಂಭವಿಸಿ ಸುಮಾರು 17 ಜನರು ಮೃತಪಟ್ಟಿದ್ದರು. 2024ರಲ್ಲಿ ಮಧ್ಯಪ್ರದೇಶದ ಹಾರ್ದ ಜಿಲ್ಲೆಯಲ್ಲಿ ಪಟಾಕಿ ಸ್ಫೋಟ ಸಂಭವಿಸಿ ಸುಮಾರು 17 ಜನರು ಮೃತಪಟ್ಟಿದ್ದರು. ಕಳೆದ ವಾರ ತಮಿಳುನಾಡು ಮತ್ತು ಕೇರಳದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದಲ್ಲಿ ಸುಮಾರು 30 ಜನರು ಮೃತಪಟ್ಟಿರುವುದನ್ನು ಇಲ್ಲಿ ನಾವು ಸ್ಮರಿಸಬಹುದು.