ನಿಮ್ಮಂತಹ ಸ್ನೇಹಿತರ ಅಗತ್ಯವಿಲ್ಲ: ಪ್ರಧಾನಿ ಮೋದಿಗೆ ಅಖಿಲೇಶ್ ತಿರುಗೇಟು
ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ನೇಹಿತ’ ಹೇಳಿಕೆಗೆ ಮಂಗಳವಾರ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ‘ನಮಗೆ ನಿಮ್ಮಂತಹ ಸ್ನೇಹಿತರ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ. ಕಳೆದ ವಾರ ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯ ಕುರಿತು ಮಾತನಾಡುತ್ತಾ ಪ್ರಧಾನಿ ಮೋದಿ ಅವರು, ‘ಅಖಿಲೇಶ್ ನನ್ನ ಸ್ನೇಹಿತ. ಕೆಲವೊಮ್ಮೆ ಅವರು ನನಗೆ ಸಹಾಯ ಮಾಡಿದ್ದಾರೆ’ ಎಂದು ಹೇಳಿದ್ದರು. ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿಯವರ ಈ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್, ‘ಹೌದು.. ಇದು ಬಹಳ ಮುಖ್ಯವಾದ ಪ್ರಶ್ನೆ. ಆದರೆ, ಸದನದಲ್ಲಿ ನಮ್ಮ ಮೈಕ್ ಆಫ್ ಮಾಡಲಾಗಿತ್ತು.
ನಮಗೆ ಅಂತಹ ಸ್ನೇಹಿತರ ಅಗತ್ಯವಿಲ್ಲ ಎಂದು ನಾವು ಹೇಳಿದ್ದೇವೆ’ ಎಂದಿದ್ದಾರೆ. ನಾವು ಅವರಿಗೆ ಯಾವ ರೀತಿಯ ಸಹಾಯವನ್ನು ನೀಡಿದ್ದೇವೆ ಎಂಬುದನ್ನು ಪ್ರಧಾನಿಯವರೇ ಸ್ಪಷ್ಟಪಡಿಸಬೇಕು ಎಂದೂ ಅಖಿಲೇಶ್ ಒತ್ತಾಯಿಸಿದ್ದಾರೆ. ‘ಯಾವ ಸಹಾಯ ಮಾಡಿದ್ದೇನೆ ಎಂದು ಪ್ರಧಾನಿಯವರನ್ನೇ ಕೇಳಿದರೆ ಅವರು ಉತ್ತಮ ನೀಡಬಲ್ಲರು. ನನ್ನ ಜ್ಞಾನಕ್ಕೆ ತಿಳಿದಿರುವಂತೆ ಅಂತಹ ಯಾವುದೇ ಘಟನೆ ನಡೆದಿಲ್ಲ’ ಎಂದು ಹೇಳಿದ್ದಾರೆ. ಮುಂದುವರಿದು, ‘ಬಿಜೆಪಿ ಸೋಲುವ ಹಂತದಲ್ಲಿದ್ದಾಗ ಏನು ಬೇಕಾದರೂ ಮಾಡಬಹುದು. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಬಿಜೆಪಿ ಈಗ ಸೋಲಿನತ್ತ ಸಾಗುತ್ತಿದೆ. ಒಮ್ಮೆ ಅಧಿಕಾರದಿಂದ ಹೊರಹೋದರೆ ಮತ್ತೆ ಎಂದಿಗೂ ಮರಳಲಾರದು. ಆ ಭಯವೇ ಅವರನ್ನು ಹೆಚ್ಚಾಗಿ ಕಾಡುತ್ತಿದೆ’ ಎಂದು ಹೇಳಿದ್ದಾರೆ.