ಉದ್ಘಾಟನೆಗೆ ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ನಿರಾಕರಿಸಿದ ಸಿಎಂ ಒಮರ್, ಆಯೋಜಕರ ವಿರುದ್ಧ ಗರಂ
ಶ್ರೀನಗರ (ಏ.18) ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಶ್ರೀನಗರದಲ್ಲಿ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಮುಖ್ಯ ಕಾರಣ ಉದ್ಘಾಟನೆಗೆ ಕಟ್ ಮಾಡಲು ರಾಷ್ಟ್ರಧ್ವಜ ರಿಬ್ಬನ್ ಹಾಕಲಾಗಿತ್ತು. ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ಸಾಧ್ಯವಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದು ಮಾತ್ರವಲ್ಲ, ರಿಬ್ಬನ್ ಬಿಚ್ಚಿಸಿದ ಘಟನೆ ಶ್ರೀನಗರದಲ್ಲಿ ನಡೆದಿದೆ.
ರಿಬ್ಬನ್ ಬಿಚ್ಚಿಸಿ ಸುತ್ತಿಕೊಟ್ಟ ಸಿಎಂ ಸ್ಥಳೀಯ ಕರಕುಶಲತೆಯನ್ನು ದೇಶಾದ್ಯಂತ ಪ್ರಚಾರ ಮಾಡಿ ವ್ಯಾಪಾರ ವಹಿವಾಟು ಹೆಚ್ಚಿಸುವುದು ಹಾಗೂ ಕಾಶ್ಮೀರದ ಕರಕುಶಲತೆ ಬೇಡಿಕೆಯನ್ನು ದೇಶವ್ಯಾಪಿ ಹೆಚ್ಚಿಸಿ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಆರಂಭಗೊಂಡ ನೋ ಯುವರ್ ಆರ್ಟಿಸಾನ್ ಉದ್ಘಾಟನೆಗೆ ಭಾರತದ ರಾಷ್ಟ್ರಧ್ವಜದ ರಿಬ್ಬನ್ ಬಳಸಲಾಗಿತ್ತು. ಇದು ಕೇವಲ ಕೇಸರಿ, ಬಿಳಿ, ಹಸಿರು ರಿಬ್ಬನ್ ಆಗಿರಲಿಲ್ಲ. ಅಕ್ಷರಶಃ ರಾಷ್ಟ್ರಧ್ವಜವೇ ಆಗಿತ್ತು, ಅಶೋಕ ಚಕ್ರ ಮುದ್ರಣಗೊಂಡಿತ್ತು.
ಉದ್ಘಾಟನೆಗೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಗಮಿಸಿದ್ದರು. ರಿಬ್ಬನ್ ಬಿಚ್ಚಿಸಿದ ಸಿಎಂ ರಿಬ್ಬನ್ ಕಟ್ ಮಾಡಲು ಆಗಮಿಸುತ್ತಿದ್ದಂತೆ ಓಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ರಾಷ್ಟ್ರಧ್ವಜದ ರಿಬ್ಬನ್ ಕತ್ತರಿಸುವುದು ಹೇಗೆ? ಯಾಕೆ ಹೀಗೆ? ಇದು ಸಾಧ್ಯವಿಲ್ಲ. ಇದನ್ನು ಬಿಚ್ಚಿ ಎಂದಿದ್ದಾರೆ. ಸಿಎಂ ಸ್ಥಳದಲ್ಲೇ ಸೂಚನೆ ನೀಡಿದ ಕಾರಣ ತಕ್ಷಣವೇ ರಿಬ್ಬನ್ ಬಿಚ್ಚಲಾಗಿದೆ. ಸ್ವತಃ ಸಿಎಂ ಓಮರ್ ಅಬ್ದುಲ್ಲಾ ರಿಬ್ಬನ್ ಬಿಚ್ಚಿಸಿದ್ದಾರೆ. ಬಳಿಕ ರಿಬ್ಬನ್ ಸುತ್ತಿ ಆಯೋಜಕರಿಗೆ ನೀಡಿದ್ದಾರೆ. ಇಷ್ಟೇ ಅಲ್ಲ, ಈ ರಿಬ್ಬನ್ ಗೌರವಯುತವಾಗಿ ಎತ್ತಿಡಿ ಎಂದು ಸೂಚಿಸಿದ್ದಾರೆ.