2nd PUC Result: ಪರೀಕ್ಷೆ ವೇಳೆಯೇ ಅಮ್ಮನ ಸಾವು; ದುಃಖದಲ್ಲಿಯೇ ಎಕ್ಸಾಂ ಬರೆದು 600 ಕ್ಕೆ 600 ಅಂಕ ತೆಗೆದ ದಿಶಾ!
2nd PUC Result topper success story: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ನಡೆಯುತ್ತಿದ್ದಾಗಲೇ ತಾಯಿಯನ್ನು ಕಳೆದುಕೊಂಡ ದುಃಖದಲ್ಲೂ ಧೃತಿಗೆಡದೆ, ಅಚಲ ಛಲದಿಂದ ಪರೀಕ್ಷೆ ಬರೆದ ಈ ವಿದ್ಯಾರ್ಥಿನಿಯು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್ ಕಾಲೇಜಿನ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ನಡುವೆಯೇ ಅಮ್ಮ ನಿಧನರಾದರೂ ದುಃಖ ಹಿಡಿದಿಟ್ಟುಕೊಂಡು 600 ಕ್ಕೆ 600 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡು ಆತ್ಮವಿಶ್ವಾಸದಿಂದಲೇ ಪರೀಕ್ಷಾ ಕೇಂದ್ರಕ್ಕೆ ಕಾಲಿಟ್ಟಿದ್ದರು. ಮೊದಲ ಮೂರು ಪರೀಕ್ಷೆಗಳು ಮುಗಿದಿದ್ದವು. ಆದರೆ, ವಿಧಿ ಆಡಿದ ಆಟವೇ ಬೇರೆಯಾಗಿತ್ತು. ಪರೀಕ್ಷೆ ನಡೆಯುತ್ತಿರುವಾಗಲೇ ದಿಶಾ ಅವರ ತಾಯಿ ಆಕಸ್ಮಿಕವಾಗಿ ನಿಧನರಾದರು.
ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಹ ಪರಿಸ್ಥಿತಿ. ಒಂದೆಡೆ ಹೆತ್ತ ತಾಯಿಯನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಭವಿಷ್ಯವನ್ನು ನಿರ್ಧರಿಸುವ ಇನ್ನುಳಿದ ಮೂರು ಪರೀಕ್ಷೆಗಳು. ಈ ಸಂಕಷ್ಟದ ಸಮಯದಲ್ಲಿ ಧೃತಿಗೆಡದ ದಿಶಾ, ತಾಯಿಯ ಕನಸನ್ನು ನನಸು ಮಾಡುವ ದೃಢ ಸಂಕಲ್ಪ ಮಾಡಿದರು.