ಸುನೇತ್ರಾ ಪವಾರ್ ಅವಿರೋಧ ಆಯ್ಕೆ ನಿಶ್ಚಿತ; ಕಣದಿಂದ ಹಿಂದಕ್ಕೆ ಸರಿದ ಕಾಂಗ್ರೆಸ್ ಅಭ್ಯರ್ಥಿ
ಬಾರಾಮತಿ: ಮಹಾರಾಷ್ಟ್ರ ರಾಜಕಾರಣದ ಕೇಂದ್ರಬಿಂದು ಬಾರಾಮತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ.
ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಈ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂತೆಗೆದುಕೊಂಡಿದೆ.
ಕೊನೆಗೂ ಒಪ್ಪಿದ ಕಾಂಗ್ರೆಸ್ ಕಾಂಗ್ರೆಸ್
ಪಕ್ಷವು ಈ ಮೊದಲು ಆಕಾಶ್ ಮೋರೆ ಅವರನ್ನು ಸುನೇತ್ರಾ ಪವಾರ್ ವಿರುದ್ಧ ಕಣಕ್ಕಿಳಿಸಿತ್ತು. ಆದರೆ, ಎನ್‌ಸಿಪಿ ನಾಯಕರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರೊಂದಿಗೆ ನಡೆಸಿದ ನಿರಂತರ ಮಾತುಕತೆ ಫಲ ನೀಡಿದೆ.
ಹಿರಿಯ ನಾಯಕ ಧನಂಜಯ್ ಮುಂಡೆ ಅವರು ಸಪ್ಕಲ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪವಾರ್ ಕುಟುಂಬದ ಭದ್ರಕೋಟೆ
ಬಾರಾಮತಿ ಕ್ಷೇತ್ರವು 1967 ರಿಂದಲೂ ಪವಾರ್ ಕುಟುಂಬದ ಆಳ್ವಿಕೆಯಲ್ಲಿದೆ. ಮೊದಲು ಶರದ್ ಪವಾರ್ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು 1991 ರಿಂದ ಸತತವಾಗಿ ಅಜಿತ್ ಪವಾರ್ ಗೆಲ್ಲುತ್ತಾ ಬಂದಿದ್ದರು. ವಿಶೇಷವೆಂದರೆ, ಅಜಿತ್ ಪವಾರ್ ಅವರು 1991 ಮತ್ತು 1995ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ಜಯಭೇರಿ ಬಾರಿಸಿದ್ದರು. ಈ ಹಳೆಯ ಮೈತ್ರಿಯನ್ನು ಮನಗಂಡು ಕಾಂಗ್ರೆಸ್ ಈ ನಿರ್ಧಾರಕ್ಕೆ ಬಂದಿದೆ. ಕೇವಲ ಎನ್‌ಸಿಪಿ ನಾಯಕರು ಮಾತ್ರವಲ್ಲದೆ, ಹಿರಿಯ ನಾಯಕ ಶರದ್ ಪವಾರ್ ಮತ್ತು ರೋಹಿತ್ ಪವಾರ್ ಕೂಡ ಬಾರಾಮತಿಯಲ್ಲಿ ಅವಿರೋಧ ಆಯ್ಕೆಗೆ ಬೆಂಬಲ ನೀಡುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿದ್ದರು.
ಅಜಿತ್ ಪವಾರ್ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಹಿಂದೆ, "ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಾವಿನ ಕುರಿತು ಎಫ್‌ಐಆರ್ ದಾಖಲಾದರೆ ಮಾತ್ರ ನಾವು ಅಭ್ಯರ್ಥಿಯನ್ನು ಹಿಂಪಡೆಯುತ್ತೇವೆ" ಎಂದು ಕಾಂಗ್ರೆಸ್ ಷರತ್ತು ಹಾಕಿತ್ತು. ಆದರೆ ಈಗಿನ ರಾಜಕೀಯ ಸಮೀಕರಣಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪಟ್ಟು ಸಡಿಲಿಸಿದೆ.
ಇತ್ತೀಚೆಗಷ್ಟೇ ಸುನೇತ್ರಾ ಪವಾರ್ ಅವರು ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚುನಾವಣಾ ತಂತ್ರಗಾರಿಕೆಯ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಫಡ್ನವೀಸ್ ಅವರು, ಬಿಜೆಪಿ ಪಕ್ಷವು 'ಹಿರಿಯ ಅಣ್ಣ'ನ ಪಾತ್ರ ವಹಿಸಿ ಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದರು.
"ವೈಯಕ್ತಿಕ ದ್ವೇಷವಿಲ್ಲ" - ಸಪ್ಕಲ್
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹರ್ಷವರ್ಧನ್ ಸಪ್ಕಲ್, ನಾವು ಕೇವಲ ಬಿಜೆಪಿ ನೇತೃತ್ವದ ಮಹಾಯುತಿಯ ಸಿದ್ಧಾಂತವನ್ನು ವಿರೋಧಿಸಲು ಅಭ್ಯರ್ಥಿಯನ್ನು ಹಾಕಿದ್ದೆವು. ಆದರೆ ಅಜಿತ್ ಪವಾರ್ ಅವರ ನಿಧನ ನಮಗೆಲ್ಲರಿಗೂ ನೋವು ತಂದಿದೆ. ಅವರ ಗೌರವಾರ್ಥವಾಗಿ ನಾವು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.