ಮುಸ್ಲಿಂ ದೇಶಗಳ ಪೆಟ್ರೋಲ್ ಬೇಕು ಆದರೆ ಇಲ್ಲಿನ ಅಲ್ಪಸಂಖ್ಯಾತರು ಬೇಡವೇ?: ಪ್ರಿಯಾಂಕ್ ಖರ್ಗೆ
ಕಲಬುರಗಿ: ಆರ್‌ಎಸ್‌ಎಸ್, ಬಿಜೆಪಿಯಂತಹ ವಿಷ ಸರ್ಪಗಳನ್ನು ಕೊಲ್ಲಿ ಎನ್ನುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಯಲ್ಲಿ ತಪ್ಪೇನಿದೆ? ವಿಷ ಸರ್ಪಗಳಿದ್ದರೆ ಕೊಲ್ಲಿ ಎಂದಿದ್ದಾರೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡರು.
ಕಲಬುರಗಿಯಲ್ಲಿವ ಗುರುವಾರ (ಏ.09) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದು ವಿಷ ಹೊಂದಿದೆಯೋ ಅದನ್ನು ನಾಶ ಮಾಡಿ ಎಂದು ಅವರು ಹೇಳಿದ್ದಾರೆ ಹೊರತು, ಯಾವುದೇ ಅರ್ಥದಲ್ಲಿಲ್ಲ ಆದರೆ ಬಿಜೆಪಿಯವರು ಹಾಗೂ ಆರ್ಎಸ್ಎಸ್ ನವರು ಬೇರೆಯವರಿಂದ ಎಐಸಿಸಿ ಅಧ್ಯಕ್ಷರ ವಿರುದ್ದ ದೂರು ಕೊಡಿಸುತ್ತಿದ್ದಾರೆ. ಆರ್‌ಎಸ್‌ಎಸ್ ಯಾಕೆ ದೂರು ಕೊಡ್ತಿಲ್ಲ ಎಂದು ಪ್ರಶ್ನಿಸಿದರು.
ಅವರ ಕೆಲವು ಸಿದ್ದಾಂತಗಳು ವಿಷ ಕಾರುತ್ತವೆ. ಸಂವಿಧಾನಕ್ಕೆ ವಿರುದ್ದವಾಗಿವೆ. ನಾವು ಬಸವತತ್ವ ಅಂಬೇಡ್ಕರ್ ತತ್ವಗಳ ಪಾಲಕರಾಗಿದ್ದೇವೆ.
ಕೆಲವರು ಆರ್‌ಎಸ್‌ಎಸ್ ಟ್ರೇನಿಂಗ್ ಪಡೆದು ಈಗ ಬಿಜೆಪಿ ಸೇರಿ ಹೀಗೆಲ್ಲಾ ಮಾತನಾಡುತ್ತಿದಾರೆ ಎಂದು ಖರ್ಗೆ ಟೀಕಿಸಿದರು.
ಅಸ್ಸಾಂ ಸಿಎಂ ಸೋಲುವ ಭೀತಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಮೋದಿಯಿಂದಲೇ ಖರ್ಗೆ ಅವರಿಗೆ ಉತ್ತರ ಕೊಡಲು ಆಗುತ್ತಿಲ್ಲ ಎಂದರು. ಖರ್ಗೆ ಅವರಾಗಲಿ, ರಾಹುಲ್ ಗಾಂಧಿಯವರಾಗಲಿ ಉಡಾಫೆಯಾಗಿ ಮಾತಾಡಿರುವ ಒಂದೇ ಉದಾಹರಣೆ ಕೊಡಿ ನೋಡೋಣ ಎಂದ ಖರ್ಗೆ, ನಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲ ಅಂದಾಗ ಬಿಜೆಪಿಯವರು ಡೈವರ್ಶನ್ ಮಾಡುತ್ತಾರೆ. ಆಸ್ಸಾಂ ಸಿಎಂ ಅವರು ಈ ಮೊದಲು ಕಾಂಗ್ರೆಸ್ ನಲ್ಲಿದ್ದರು ಎಂದರು. ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ಬರುತ್ತಿದ್ದಾರೆ ಎಂದಾದರೆ ಕೇಂದ್ರ ಗೃಹ ಸಚಿವರು ಕತ್ತೆ ಕಾಯುತ್ತಿದ್ದಾರಾ? ಒಂದೆಡೆ ಬಿಜೆಪಿಯವರು ಮುಸ್ಲಿಂ ವಿರೋಧಿ ಮಾತನಾಡುತ್ತಾರೆ, ಇನ್ನೊಂದು ಕಡೆ ಇರಾನ್ ಅಫಘಾನಿಸ್ತಾನ ಅರಬ್ ದೇಶಗಳಿಂದ ವ್ಯಾಪಾರ ಮಾಡುತ್ತಾರೆ.
ಹಾಗಾದರೆ ಇಸ್ಲಾಮಿಕ್ ದೇಶಗಳ ಜೊತೆ ವ್ಯಾಪಾರ ಬಿಟ್ಟು ಬಿಡಿ ನೋಡೋಣ. ಅವರಿಂದ ಪೆಟ್ರೋಲ್, ಯುರಿಯಾ, ಕಚ್ಚಾ ತೈಲ, ವ್ಯಾಪಾರ ಬೇಕು, ಆದರೆ ಇಲ್ಲಿ ಮಾತ್ರ ಅಲ್ಪಸಂಖ್ಯಾತರು ಬೇಡವಾ ಎಂದು ಪ್ರಶ್ನಿಸಿದರು.
ಭಾರತಕ್ಕೆ ಕಚ್ಚಾ ತೈಲ, ಇಂಧನ ಎಲ್ಲಿಂದ ಬರುತ್ತಿದೆ. ಈಗಲಾದರೂ ಗೊತ್ತಾಯಿತಾ? ಭಾರತಕ್ಕೆ ಬೇಕಾಗುವ ಕೇಸರ್ ನಲ್ಲಿ 90 % ಕೇಸರ್ ಇರಾಕ್ ಹಾಗೂ ಅಫ್ಘಾನಿಸ್ತಾನದಿಂದ ಬರುತ್ತದೆ. ಬಿಜೆಪಿಯವರಿಗೆ ಎರಡೆರಡು ನಾಲಿಗೆ ಇದೆ ಎಂದರು.
ಉಪಚುನಾವಣೆ ಎರಡೂ ಕಡೆ ಗೆಲುವು ಖಚಿತ
ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಎರಡೂ ಕ್ಷೇತ್ರಗಳಲ್ಲಿ ನಾವು ಬಹಳ ದೊಡ್ಡ ಅಂತರದಲ್ಲಿ ಜಯ ಸಾಧಿಸುತ್ತೇವೆ. ಸಾಮಾಜಿಕ, ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳಾದ ಗ್ಯಾರೆಂಟಿ ಯೋಜನೆಗಳಿಗೆ ನಮಗೆ ಶ್ರೀರಕ್ಷೆಯಾಗಲಿವೆ ಎನ್ನುವ ಭರವಸೆಯಿದೆ. ಶಾಮನೂರು ಕುಟುಂಬದ ಹಾಗೂ ಮೇಟಿ ಕುಟುಂಬದ ಸೇವೆಗೆ ಜನಾಶೀರ್ವಾದ ಮಾಡುತ್ತಾರೆ, ಜನ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.