ಪ್ರದೀಪ್ ಈಶ್ವರ್‌ನ ನಿಮ್ಹಾನ್ಸ್ ಗೆ ಸೇರಿಸಿ: ಡಿಸಿ ಮೂಲಕ ಚುನಾವಣಾ ಆಯೋಗಕ್ಕೆ ಮಂಡ್ಯ ಬಿಜೆಪಿ ಮನವಿ
ಮಂಡ್ಯ (ಮಾ.25): ದಾವಣಗೆರೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಲಘು ಹೇಳಿಕೆ ನೀಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಅಸಂವಿಧಾನಿಕ ಪದ ಬಳಕೆ ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ಕಿಡಿ
ದಾವಣಗೆರೆಯ ಬಹಿರಂಗ ಸಭೆಯಲ್ಲಿ ಪ್ರಚಾರ ನಡೆಸುವಾಗ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ವಿರುದ್ಧ ಅತ್ಯಂತ ಲಘುವಾಗಿ ಮತ್ತು ಅಸಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಶಾಸಕರ ಈ ನಡವಳಿಕೆಯಿಂದ ಕೆಂಡಾಮಂಡಲವಾಗಿರುವ ಕಾರ್ಯಕರ್ತರು, ಕೂಡಲೇ ಅವರ ಮೇಲೆ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ.
'ನಿಮ್ಹಾನ್ಸ್‌ಗೆ ಸೇರಿಸಿ, ಸರ್ಟಿಫಿಕೇಟ್ ತರೋವರೆಗೆ ಶಾಸಕ ಸ್ಥಾನದಿಂದ ಅಮಾನತು ಮಾಡಿ'
ಶಾಸಕ ಪ್ರದೀಪ್ ಈಶ್ವರ್ ಮಾನಸಿಕ ಆರೋಗ್ಯ ಸರಿಯಿಲ್ಲವೆಂದು ಅವರ ವರ್ತನೆಗಳಿಂದ ಗೊತ್ತಾಗುತ್ತಿದೆ ಎಂದು ಟೀಕಿಸಿರುವ ಬಿಜೆಪಿ ಮುಖಂಡರು, ಅವರನ್ನು ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ವೈದ್ಯಕೀಯ ಪ್ರಮಾಣಪತ್ರ ತರುವವರೆಗೆ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಬೇಕು ಮತ್ತು ದಾವಣಗೆರೆ ಜಿಲ್ಲೆಯಿಂದ ಅವರನ್ನು ಗಡಿಪಾರು ಮಾಡಬೇಕು ಎಂದು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.