ಹೊರ್ಮುಜ್ ಬಂದ್: ಯೂರಿಯಾ, ಡಿಎಪಿ ಸೇರಿ ಭಾರತಕ್ಕೆ ರಸಗೊಬ್ಬರ ಪೂರೈಕೆಗೆ ಹೊಡೆತ
ಮೂರು ವಾರಗಳ ಬಳಿಕವೂ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಜೋರಾಗಿ ನಡೆಯುತ್ತಿದೆ. ಹೊರ್ಮುಜ್ ಜಲಸಂಧಿ ಮುಚ್ಚಿರುವುದರಿಂದ 22 ದೇಶಗಳು ಇರಾನ್ ವಿರುದ್ಧ ಸಿಡಿದು ನಿಂತಿವೆ. ಇತರೆ ದೇಶಗಳು ಸಹ ಯುದ್ಧಕ್ಕೆ ಪ್ರವೇಶಿಸುವ ಸೂಚನೆ ನೀಡಿವೆ. ಯುದ್ಧ ಮುಂದುವರಿದು, ಹೊರ್ಮುಜ್ ಜಲಸಂಧಿ ತೆರೆಯದೇ ಇದ್ದರೆ, ಕೃಷಿಗೆ ಅತ್ಯಂತ ಪ್ರಮುಖವಾಗಿ ಬೇಕಾದ ರಸಗೊಬ್ಬರ ಪೂರೈಕೆ ಸರಪಳಿ ಮೇಲೆ ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಣಾಮ ಬೀರುತ್ತದೆ ಎಂದು ವರದಿ ತಿಳಿಸಿದೆ. ಅಲ್ಲದೇ, ಕೃಷಿ ಮೇಲೆ ಹೆಚ್ಚು ಆಧಾರಿತವಾಗಿರುವ ಆರ್ಥಿಕತೆಗಳಲ್ಲಿ ಉದ್ಯೋಗ ಕಡಿತ, ಜೀವನೋಪಾಯಕ್ಕೆ ತೊಂದರೆ ಉಂಟಾಗುತ್ತದೆ ಎಂದು ಅದು ಹೇಳಿದೆ. ಹೀಗಾಗಿ, ಕೃಷಿ ಮೇಲೆ ಆಧಾರಿತವಾದ ಭಾರತದ ಮೇಲೂ ಪರಿಣಾಮ ಬೀರುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಜಗತ್ತಿನ ಶೇ 20ರಷ್ಟು ತೈಲ ಸರಬರಾಜಿನ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ದೇಶದಲ್ಲಿ ಪ್ರಮುಖವಾಗಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಈ ನಡುವೆ, ಹೊರ್ಮುಜ್ ಕಣಿವೆ ಮೂಲಕ ಸರಬರಾಜಾಗುವ ಇತರ ಸಾಮಗ್ರಿಗಳ ಮೇಲೂ ಹೊಡೆತ ಬಿದ್ದಿದೆ. ಈ ಪೈಕಿ ರಸಗೊಬ್ಬರ ಸಹ ಒಂದಾಗಿದೆ. ಯುದ್ಧ ಮತ್ತು ಹೊರ್ಮುಜ್ ಮೇಲಿನ ಅನೌಪಚಾರಿಕ ದಿಗ್ಬಂಧನದಿಂದಾಗಿ ಭಾರತವು ರಸಗೊಬ್ಬರ ಪೂರೈಕೆ ಸರಪಳಿಯಲ್ಲಿ ಶೇ 20-25ರಷ್ಟು ಅಡಚಣೆಗಳಿಗೆ ಒಳಗಾಗಿದೆ ಎಂದು ದತ್ತಾಂಶವು ಸೂಚಿಸುತ್ತದೆ. ಏಕೆಂದರೆ, ತೈಲದಂತೆ ರಸಗೊಬ್ಬರ ಸಹ ಗಲ್ಫ್‌ನಿಂದ ಹೊರ್ಮುಕ್ ಜಲಸಂಧಿ ಮೂಲಕ ಭಾರತಕ್ಕೆ ಸರಬರಾಜಾಗುತ್ತದೆ. ಈಗಿನ ತಡೆಯು ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ.
ಯೂರಿಯಾ ಮತ್ತು ಅಮೋನಿಯಾ ಸೇರಿದಂತೆ ಭಾರತದ ಸಾರಜನಕ ಗೊಬ್ಬರದ ಆಮದುಗಳಲ್ಲಿ ಅಂದಾಜು ಶೇ 63 ಮತ್ತು ಡಿಎಪಿ ಅಥವಾ ಡೈ ಅಮೋನಿಯಂ ಫಾಸ್ಫೇಟ್‌ನಂತಹ ಶೇ 32 ರಷ್ಟು ರಸಗೊಬ್ಬರ ಗಲ್ಫ್ ರಾಷ್ಟ್ರಗಳಿಂದ ಬರುತ್ತದೆ.
ಸೌದಿ ಅರೇಬಿಯಾ ಭಾರತವು ಅಂದಾಜು ಶೇ 42 ರಷ್ಟು ಪೊಟ್ಯಾಶ್ ಆಮದು ಮಾಡಿಕೊಳ್ಳುತ್ತದೆ.
ಹಾಗೆ ನೋಡೊದರೆ, ಇರಾನ್ ಮೇಲೆ ಭಾರತದ ಅವಲಂಬನೆ ಕಡಿಮೆ. 2024ರಲ್ಲಿ, ಭಾರತವು ಯುಎಇ, ಸೌದಿ ಅರೇಬಿಯಾ ಮತ್ತು ಕತಾರ್‌ನಿಂದ 231 ಮಿಲಿಯನ್ ಡಾಲರ್ ಮೌಲ್ಯದ ಯೂರಿಯಾವನ್ನು ಖರೀದಿಸಿತ್ತು. ಇರಾನ್‌ನಿಂದ ಕೇವಲ 2.59 ಮಿಲಿಯನ್ ಡಾಲರ್ ಮೌಲ್ಯದ ರಸಗೊಬ್ಬರ ಖರೀದಿಸಿತ್ತು.
ಭಾರತವು ಗಲ್ಫ್ ರಾಷ್ಟ್ರಗಳಿಂದ ಖರೀದಿಸಿದ ರಸಗೊಬ್ಬರ ದಾಸ್ತಾನುಗಳನ್ನು ಹೊರ್ಮುಜ್ ಜಲಸಂಧಿಯ ಮೂಲಕ ಸಾಗಿಸುತ್ತದೆ. ಈಗ ಅದನ್ನು ಮುಚ್ಚುವುದರಿಂದ ಪೂರೈಕೆಗೆ ಅಡ್ಡಿ ಉಂಟಾಗಿದೆ.
ಈ ವರ್ಷ ರಸಗೊಬ್ಬರ ಆಮದು ದಾಖಲೆಯ 18 ಬಿಲಿಯನ್ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಹಾಗಾಗಿ, ಸರಬರಾಜಿಗೆ ಉಂಟಾಗುವ ಅಡೆತಡೆಯು ಕೃಷಿ ಮೇಲೆ ಪರಿಣಾಮ ಬೀರಲಿದೆ.
ಜೂನ್, ಜುಲೈನ ಮುಂಗಾರು ಬಿತ್ತನೆ ವೇಳೆಗೆ ರಸಗೊಬ್ಬರ ಕೊರತೆ, ಬೆಲೆ ಏರಿಕೆಯು ರೈತರನ್ನು ಕಾಡಬಹುದು.
ಹಿಡುವಳಿ ಕುಂಠಿತವಾಗಿ ಆಹಾರ ಭದ್ರತೆಗೆ ಹೊಡೆತ ನೀಡಬಹುದು ಎಂದು ಹೇಳಲಾಗುತ್ತಿದೆ.
ಪರಿಹಾರ ಏನು?
ತೈಲವನ್ನು ರಷ್ಯಾದಿಂದ ಖರೀದಿಸಿ ಪರ್ಯಾಯ ಮಾರ್ಗ ಕಂಡುಕೊಂಡಂತೆ ರಸಗೊಬ್ಬರಕ್ಕೂ ಪರ್ಯಾಯ ಹುಡುಕಬೇಕಿದೆ. ಆದರೆ, ಆಯ್ಕೆ ಸೀಮಿತವಾಗಿದೆ ಎಂದು ವರದಿ ಹೇಳುತ್ತದೆ. ಉಕ್ರೇನ್‌ನಿಂದ ಯೂರಿಯಾ ಆಮದು ಮಾಡಿಕೊಳ್ಳಬಹುದು. ಆದರೆ, ಅದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ. ಉಳಿದಂತೆ, ರಷ್ಯಾ ಮತ್ತು ಚೀನಾ ಮೇಲೆ ಯೂರಿಯಾಗೆ ಅವಲಂಬಿಸಬೇಕಿದೆ. ಈ ಎರಡೂ ದೇಶಗಳು ಹೊರ್ಮುಜ್ ಮಾರ್ಗದಿಂದಲ್ಲದೆ ಬೇರೆಡೆಯಿಂದ ಸರಬರಾಜು ಮಾಡುತ್ತವೆ. ಆದರೆ, ಚೀನಾ ಮೇಲೆ ಅವಲಂಬನೆ ತಪ್ಪಿಸಲೆಂದೇ ಭಾರತವು ಗಲ್ಫ್‌ನಿಂದ ಯೂರಿಯಾ ಆಮದು ಮಾಡಿಕೊಳ್ಳುತ್ತಿತ್ತು.
ಭಾರತವು ನೈಜೀರಿಯಾ, ಉಜ್ಬೇಕಿಸ್ತಾನ್ ಮತ್ತು ಇಂಡೋನೇಷ್ಯಾದಿಂದ ಯೂರಿಯಾ ಆಮದು ಮಾಡಿಕೊಳ್ಳಬಹುದು.
ಆದರೆ, ಅಲ್ಲಿಯೂ ದೇಶಕ್ಕೆ ಬೇಕಾದಷ್ಟು ಯೂರಿಯಾ ಖರೀದಿಗೆ ಲಭ್ಯವಿಲ್ಲ.
ಈ ಎಲ್ಲ ಆಯ್ಕೆಗಳನ್ನು ನೋಡಿದ ಬಳಿಕ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಒಂದು ಕಾರ್ಯಸಾಧ್ಯವಾದ ಪರ್ಯಾಯವಾಗಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಇದು ದೀರ್ಘಾವಧಿಗೆ ಅನುಕೂಲಕರವಾಗಿದ್ದು, ವಿದೇಶಗಳಲ್ಲಿ ಸಂಘರ್ಷದ ಸಮಯದಲ್ಲಿ ಅಪಾಯವನ್ನು ಕಡಿಮೆ ಮಾಡುವ ಖಾತರಿಯಾಗಿದೆ. ಭಾರತವು ಅಂದಾಜು 38 ಮಿಲಿಯನ್ ಟನ್‌ಗಳ ರಸಗೊಬ್ಬರ ಉತ್ಪಾದಿಸುವ ಮೂಲಕ ಸ್ವಾವಲಂಬನೆಯ ಗುರಿಯನ್ನು ಹೊಂದಿದೆ. ಅದನ್ನು ಕಾರ್ಯಗತಗೊಳಿಸಲು ಇದು ಸೂಕ್ತ ಸಮಯ ಎಂಬುದು ಅವರ ಅಭಿಪ್ರಾಯವಾಗಿದೆ.
ಪಶ್ಚಿಮ ಏಷ್ಯಾದಿಂದ ಆಮದು ತಡೆಯಿಂದಾಗಿ ದೇಶದಲ್ಲಿ ಯೂರಿಯಾ ಮತ್ತು ಇತರ ರಸಗೊಬ್ಬರಗಳು ಹಾಗೂ ನೈಸರ್ಗಿಕ ಅನಿಲದ ಲಭ್ಯತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ..
ಮಾರ್ಚ್ 6 ರಂದು ರಸಗೊಬ್ಬರ ಇಲಾಖೆಯು ಹೇಳಿತ್ತು. ಆದರೆ, ಈಗ ಯುದ್ಧ ಮತ್ತಷ್ಟು ದಿನ ಮುಂದುವರಿದಿದ್ದು, ಪರಿಣಾಮಗಳನ್ನು ಕಾದುನೋಡಬೇಕಿದೆ