Fitness Concern: ಐಪಿಎಲ್ ಆರಂಭಕ್ಕೆ ಮುನ್ನವೇ ಆರ್ ಸಿಬಿ ತಂಡಕ್ಕೆ ಹ್ಯಾಜಲ್‌ವುಡ್ ಚಿಂತೆ!
ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ 19 ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆದರೆ ಇದೀಗ ಎರಡೂ ತಂಡಗಳಿಗೂ ಗಾಯಾಳುಗಳ ಚಿಂತೆ ಕಾಡುತ್ತಿದೆ.
ಉಭಯ ತಂಡಗಳ ಆಸ್ಟ್ರೇಲಿಯಾದ ಆಟಗಾರರಾದ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಈ ಋತುವಿನ ಆರಂಭಿಕ ಪಂದ್ಯಗಳಿಗೆ ಗೈರುಹಾಜರಾಗಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ಬಾರಿ ಆರ್ ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಅವರು ಇತ್ತೀಚೆಗೆ ಕ್ರಿಕೆಟ್ ಆಡಿಲ್ಲ.
ಅವರು ಕೊನೆಯ ಬಾರಿಗೆ ನವೆಂಬರ್ 2025 ರಲ್ಲಿ ನ್ಯೂ ಸೌತ್ ವೇಲ್ಸ್ ಪರ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು, ತರುವಾಯ ಆಶಸ್ ಸರಣಿ ಮತ್ತು 2026 ರ ಟಿ20 ವಿಶ್ವಕಪ್ ಎರಡನ್ನೂ ತಪ್ಪಿಸಿಕೊಂಡರು.
ಕಮಿನ್ಸ್ ಸ್ವಲ್ಪ ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ, ಕೊನೆಯ ಬಾರಿಗೆ ಡಿಸೆಂಬರ್ 2025 ರಲ್ಲಿ ಅಡಿಲೇಡ್ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದರು. ಗಾಯದ ಕಾರಣದಿಂದಾಗಿ ಅವರು 2026 ರ ಟಿ20 ವಿಶ್ವಕಪ್ ಕೂಡಾ ತಪ್ಪಿಸಿಕೊಂಡರು, ಸನ್ ರೈಸರ್ಸ್ ತಂಡದ ನಾಯಕರಾಗಿರುವ ಅವರು ಪೂರ್ಣ ಫಿಟ್‌ನೆಸ್‌ಗೆ ಮರಳಲು ಕೆಲಸ ಮಾಡುತ್ತಿದ್ದಾರೆ.
ಸದ್ಯದ ವರದಿಯ ಪ್ರಕಾರ ಇಬ್ಬರೂ ಐಪಿಎಲ್ 2026ರ ಆರಂಭಿಕ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಆದಾಗ್ಯೂ, ಮುಂಬರುವ ವಾರಗಳಲ್ಲಿ ಇಬ್ಬರೂ ಆಟಗಾರರು ಪೂರ್ಣ ಫಿಟ್ನೆಸ್ ಮರಳಿ ಪಡೆದರೆ, ಪಂದ್ಯಾವಳಿಯ ಯಾವುದೇ ಹಂತದಲ್ಲಿ ಅವರು ಆಡುವ ನಿರೀಕ್ಷೆಯಿದೆ.
ಆಸ್ಟ್ರೇಲಿಯಾದ ಇಬ್ಬರು ವೇಗಿಗಳ ಲಭ್ಯತೆಯ ಕುರಿತು ಎರಡೂ ಫ್ರಾಂಚೈಸಿಗಳಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಸುದ್ದಿ ಬಂದಿಲ್ಲ. ಬದಲಿ ಯಾರು?
ಆರ್ ಸಿಬಿ ತಂಡದಲ್ಲಿ ಹ್ಯಾಜಲ್‌ವುಡ್ ಲಭ್ಯವಿದ್ದರೆ ಅವರೇ ಖಚಿತ ಆಯ್ಕೆಯಾಗುತ್ತಾರೆ. ಸದ್ಯ ಅವರ ಅನುಪಸ್ಥಿತಿಯಲ್ಲಿ ಆರ್ ಸಿಬಿಯು ನ್ಯೂಜಿಲ್ಯಾಂಡ್ ನ ಜೇಕಬ್ ಡಫಿ ಅಥವಾ ಶ್ರೀಲಂಕಾದ ನುವಾನ್ ತುಷಾರ ಅವರತ್ತ ನೋಡಬಹುದು.
ಎಸ್‌ಆರ್‌ಎಚ್ ತಂಡದಲ್ಲಿ ಬದಲಿ ಆಟಗಾರರ ಆಯ್ಕೆಯೂ ಇದೆ. ಕಮಿನ್ಸ್ ಲಭ್ಯವಿಲ್ಲದಿದ್ದರೆ ಇಂಗ್ಲೆಂಡ್‌ನ ಬ್ರೈಡನ್ ಕಾರ್ಸ್ ಮತ್ತು ಶ್ರೀಲಂಕಾದ ವೇಗಿ ಎಹ್ಸಾನ್ ಮಾಲಿಂಗ ಆಡುವ ಹನ್ನೊಂದಕ್ಕೆ ಸೇರ್ಪಡೆಗೊಳ್ಳುವ ಬೌಲರ್‌ಗಳಲ್ಲಿ ಸೇರಬಹುದು.
ಕಮಿನ್ಸ್ ಅವರು ಹೈದರಾಬಾದ್ ತಂಡದ ನಾಯಕನಾದ ಕಾರಣ ಫ್ರಾಂಚೈಸಿ ಅಲ್ಲೂ ಯೋಚಿಸಬೇಕಾಗಿದೆ. ಭಾರತೀಯ ಯುವ ಪ್ರತಿಭೆಗಳಾದ ಅಭಿಷೇಕ್ ಶರ್ಮಾ ಅಥವಾ ಇಶಾನ್ ಕಿಶಾನ್ ಈ ಜವಾಬ್ದಾರಿ ಹೊರಬಹುದು ಎನ್ನಲಾಗಿದೆ.