ಒಡಿಶಾ ರಾಜಕೀಯದಲ್ಲಿ ಸಂಚಲನ: ಅಡ್ಡ ಮತದಾನ ಮಾಡಿದ ಮೂವರು ಕಾಂಗ್ರೆಸ್ ಶಾಸಕರು ಅಮಾನತು
ಭುವನೇಶ್ವರ: ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ ಆರೋಪದ ಮೇಲೆ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ (OPCC) ಮಂಗಳವಾರ ಮೂವರು ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಸೋಫಿಯಾ ಫಿರ್ದೌಸ್ (ಬಾರಬತಿ-ಕಟಕ್), ರಮೇಶ್ ಚಂದ್ರ ಜೇನಾ (ಸನಾಖೇಮುಂಡಿ) ಮತ್ತು ದಶರಥಿ ಗಮಾಂಗೊ (ಮೋಹನಾ).ಅಮಾನತುಗೊಂಡ ಶಾಸಕರಾಗಿದ್ದಾರೆ.
ಈ ಮೂವರು ಶಾಸಕರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಾ. ದತ್ತೇಶ್ವರ್ ಹೋತಾ ಅವರಿಗೆ ಮತ ಹಾಕುವ ಬದಲು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಮತ ಚಲಾಯಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದು, "ಯಾರು ಕಾಂಗ್ರೆಸ್‌ಗೆ ದ್ರೋಹ ಮಾಡುತ್ತಾರೋ ಅವರು ರಾಷ್ಟ್ರಕ್ಕೆ ದ್ರೋಹ ಮಾಡಿದಂತೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿ, ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿರೋಧಕ ಕಾಯ್ದೆ) ಅಡಿಯಲ್ಲಿ ಅವರನ್ನು ಅನರ್ಹಗೊಳಿಸಲು ಪಕ್ಷ ನಿರ್ಧರಿಸಿದೆ.
ಈ ಮೂವರು ಕಾಂಗ್ರೆಸ್ ಶಾಸಕರು ಮಾತ್ರವಲ್ಲದೆ, ಬಿಜು ಜನತಾ ದಳದ (ಬಿಜೆಡಿ) ಎಂಟು ಶಾಸಕರು ಕೂಡ ದಿಲೀಪ್ ರಾಯ್ ಪರವಾಗಿ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಡಿ ಜಂಟಿಯಾಗಿ ಬೆಂಬಲಿಸಿದ್ದ 'ಸೇನಾ ಅಭ್ಯರ್ಥಿ' ದತ್ತೇಶ್ವರ ಹೋತಾ ಅವರು ಪರಾಭವಗೊಂಡಿದ್ದಾರೆ. ಒಟ್ಟು 4 ರಾಜ್ಯಸಭಾ ಸ್ಥಾನಗಳ ಪೈಕಿ ಬಿಜೆಪಿ 2, ಬಿಜೆಡಿ 1 ಮತ್ತು ದಿಲೀಪ್ ರಾಯ್ 1 ಸ್ಥಾನದಲ್ಲಿ ಜಯಗಳಿಸಿದ್ದಾರೆ.