ಮಾಹಿತಿ ನೀಡದೆ ಇರಾನ್ ಗಡಿ ದಾಟದಂತೆ ಭಾರತೀಯರಿಗೆ ರಾಯಭಾರ ಕಚೇರಿ ಎಚ್ಚರಿಕೆ
ಟೆಹರಾನ್: ಇರಾನ್‌ನಲ್ಲಿ ನೆಲೆಸಿರುವ ಭಾರತೀಯರು ತನ್ನೊಂದಿಗೆ ಸಂವಹನ ಸಾಧಿಸದೆ ದೇಶದ ಗಡಿ ದಾಟಬಾರದು ಎಂದು ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸರಿಯಾದ ಮಾಹಿತಿ ಅಥವಾ ಮಾರ್ಗದರ್ಶನವಿಲ್ಲದೆ ಭೂ ಮಾರ್ಗವಾಗಿ ಇರಾನ್ ಗಡಿ ದಾಟಲು ಪ್ರಯತ್ನಿಸುವ ಭಾರತೀಯರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದೆ.
'ಸದ್ಯ ಇರಾನ್‌ನಲ್ಲಿ ನೆಲೆಸಿರುವ ಭಾರತೀಯರು, ರಾಯಭಾರ ಕಚೇರಿಯೊಂದಿಗೆ ಮುಂಚಿತವಾಗಿ ಮತ್ತು ಸ್ಪಷ್ಟವಾಗಿ ಸಮನ್ವಯ ಸಾಧಿಸದೆ ಆ ದೇಶದ ಯಾವುದೇ ಭೂ ಗಡಿಗೆ ತಲುಪುವ ಅಥವಾ ಅದನ್ನು ದಾಟುವ ಪ್ರಯತ್ನ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ'.
ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
'ಯಾವುದೇ ನಾಗರಿಕರು ಸಂವಹನ ಸಾಧಿಸದೆ ಒಂದು ಬಾರಿ ಇರಾನ್ ಗಡಿ ದಾಟಿದರೆ, ಅವರಿಗೆ ನೆರವು ನೀಡಲು ರಾಯಭಾರ ಕಚೇರಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ' ಎಂದು ಹೇಳಿದೆ. 'ಭಾರತೀಯ ಮೂಲದವರೊಂದಿಗೆ ರಾಯಭಾರ ಕಚೇರಿಯು ನಿರಂತರವಾಗಿ ಸಂಪರ್ಕದಲ್ಲಿದೆ. ಅಗತ್ಯವಿರುವ ಎಲ್ಲ ನೆರವು ನೀಡಲು ಕ್ರಮ ಕೈಗೊಳ್ಳುತ್ತಿದೆ' ಎಂದು ಮಾಹಿತಿ ನೀಡಿದೆ.
ಸಹಾಯವಾಣಿ ಸಂಖ್ಯೆಯನ್ನೂ ಹಂಚಿಕೊಂಡಿದ್ದು, ಪ್ರಯಾಣ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ತಿಳಿಸಿದೆ.