ಮಾಸ್ಕೋ ಮೇಲೆ ಉಕ್ರೇನ್‌ನಿಂದ ಡ್ರೋನ್ ದಾಳಿ: 28 ಡ್ರೋನ್‌ಗಳನ್ನು ಹೊಡೆದುರುಳಿಸಿದ ರಷ್ಯಾ
ಮಾಸ್ಕೋ:. ರಾಜಧಾನಿ ಮಾಸ್ಕೋ ಗುರಿಯಾಗಿಸಿಕೊಂಡು ಉಕ್ರೇನ್ ಸೇನೆ ನಡೆಸಿದ ಬೃಹತ್ ಡ್ರೋನ್ ದಾಳಿಯನ್ನು ರಷ್ಯಾದ ವಾಯು ರಕ್ಷಣಾ ಪಡೆಗಳು ಭಾನುವಾರ (ಮಾರ್ಚ್ 15) ವಿಫಲಗೊಳಿಸಿವೆ.
ವಾಯುಮಾರ್ಗದ ಮೂಲಕ ದಾಳಿ ನಡೆಸಲು ಮುಂದಾಗಿದ್ದ ಉಕ್ರೇನ್‌ನ 28 ಡ್ರೋನ್‌ಗಳನ್ನು ಹೊಡೆದುರು, ಳಿಸಲಾಗಿದೆ ಎಂದು ಮಾಸ್ಕೋ ಮೇಯರ್ ಸರ್ಗೆಯ್ ಸೊಬಯಾನಿನ್ ತಿಳಿಸಿದ್ದಾರೆ.
ಸತತ ದಾಳಿ: ಇದು ಎರಡನೇ ದಿನವೂ ಮುಂದುವರಿದಿರುವ ಸತತ ದಾಳಿಯಾಗಿದೆ. ಶನಿವಾರ ಕೂಡ ರಷ್ಯಾ 16 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ವರದಿಯಾಗಿತ್ತು.
ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕೋದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ವ್ನುಕೊವೊ (Vnukovo) ಮತ್ತು ಶೆರೆಮೆಟ್ಯೆವೊ (Sheremetyevo) ತಮ್ಮ ಎಲ್ಲಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಇದರಿಂದಾಗಿ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮಾಸ್ಕೋ ಸೇರಿದಂತೆ ರಷ್ಯಾದ ವಿವಿಧ ಗಡಿ ಪ್ರದೇಶಗಳಲ್ಲಿ ಸುಮಾರು 280ಕ್ಕೂ ಹೆಚ್ಚು ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.
ಇಂಟರ್ನೆಟ್ ಸೇವೆ ಸ್ಥಗಿತ: ಡ್ರೋನ್ ದಾಳಿಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಸಹಕಾರಿಯಾಗಲೆಂದು ಮಾಸ್ಕೋ ನಗರದಲ್ಲಿ ಆಯ್ದ ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಆಫ್‌ಲೈನ್ ಮ್ಯಾಪ್‌ಗಳನ್ನು ಬಳಸುವಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ.
ದಾಳಿಯಿಂದ ಯಾವುದೇ ಸಾವು-ನೋವುಗಳು ಸಂಭವಿಸಿರುವ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ. ಆದರೆ, ರಷ್ಯಾದ ಪ್ರಮುಖ ನಗರಗಳ ಮೇಲೆ ನಡೆಯುತ್ತಿರುವ ಈ ಸರಣಿ ದಾಳಿಗಳು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.