ಇದು ಭಾರತದ ಪವರ್, ಇರಾನ್ ಎಚ್ಚರಿಕೆಯ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿ ಮುಂಬೈಗೆ ಬಂದ ತೈಲ ಟ್ಯಾಂಕರ್!
ಬೆಂಗಳೂರು (ಮಾ.11): ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷದ ಕಾರಣದಿಂದಾಗಿ ವಿಶ್ವದ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ' (Strait of Hormuz) ಅಕ್ಷರಶಃ ಸ್ತಬ್ಧಗೊಂಡಿದೆ. ಈ ಅಪಾಯಕಾರಿ ಪರಿಸ್ಥಿತಿಯ ನಡುವೆಯೇ, ಇರಾನ್ ದೇಶದಲ್ಲದ ಕಚ್ಚಾ ತೈಲವನ್ನು ಹೊತ್ತ ಮೊದಲ ಟ್ಯಾಂಕರ್ ಯಶಸ್ವಿಯಾಗಿ ಈ ಮಾರ್ಗದ ಮೂಲಕ ಭಾರತಕ್ಕೆ ಬಂದು ತಲುಪಿದೆ ಎಂದು S&P ಗ್ಲೋಬಲ್ ಕಮೊಡಿಟಿಸ್ ವರದಿ ಮಾಡಿದೆ. ತನ್ನ ದೇಶದ ಹೊರತಾದ ಯಾವುದೇ ದೇಶದ ತೈಲ ಟ್ಯಾಂಕರ್‌ಅನ್ನು ಈ ಮಾರ್ಗದ ಮೂಲಕ ಸಾಗಲು ಬಿಡೋದಿಲ್ಲ, ಹಾಗೇನಾದರೂ ಸಾಗಿದರೆ ಕ್ಷಿಪಣಿ ದಾಳಿ ನಡೆಸೋದಾಗಿ ಇರಾನ್ ಎಚ್ಚರಿಸಿತ್ತು.
ಮುಂಬೈಗೆ ಬಂತು 'ಶೆನ್‌ಲಾಂಗ್' ಟ್ಯಾಂಕರ್
S&P ಅಂಕಿಅಂಶಗಳ ಪ್ರಕಾರ, ಮಾರ್ಚ್ 1 ರಂದು ಸೌದಿ ಅರೇಬಿಯಾದ ಅತಿದೊಡ್ಡ ತೈಲ ರಫ್ತು ಟರ್ಮಿನಲ್ 'ರಾಸ್ ತನುರಾ'ದಿಂದ ತೈಲವನ್ನು ತುಂಬಿಸಿಕೊಂಡ ‘ಶೆನ್‌ಲಾಂಗ್’ (Shenlong) ಎಂಬ ಟ್ಯಾಂಕರ್ ಮಾರ್ಚ್ 10 ರಂದು ಭಾರತದ ಮುಂಬೈ ತೀರಕ್ಕೆ ಬಂದಿದೆ. ರಾಸ್ ತನುರಾದಲ್ಲಿದ್ದಾಗ ಹಡಗಿನ ಡ್ರಾಫ್ಟ್ (ನೀರಿನಲ್ಲಿ ಹಡಗಿನ ಆಳ) 9.3 ಮೀಟರ್ ಇತ್ತು, ಆದರೆ ಮುಂಬೈಗೆ ಬಂದಾಗ ಅದು 15.8 ಮೀಟರ್ ಆಗಿತ್ತು. ಇದು ಹಡಗಿನಲ್ಲಿ ಪೂರ್ಣ ಪ್ರಮಾಣದ ತೈಲ ಲೋಡ್ ಆಗಿರುವುದನ್ನು ಖಚಿತಪಡಿಸಿದೆ.
ಈ ಹಡಗು 'ಶೆನ್‌ಲಾಂಗ್ ಶಿಪ್ಪಿಂಗ್ ಲಿಮಿಟೆಡ್' ಒಡೆತನದಲ್ಲಿದ್ದು, ಗ್ರೀಸ್‌ನ 'ಡೈನಾಕಾಮ್ ಟ್ಯಾಂಕರ್ಸ್ ಮ್ಯಾನೇಜ್‌ಮೆಂಟ್' ಇದನ್ನು ನಿರ್ವಹಿಸುತ್ತಿದೆ.
ರಹಸ್ಯ ಕಾರ್ಯಾಚರಣೆ?
ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟುವ ಮುನ್ನ ತನ್ನ ಆಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್ (AIS - ಹಡಗಿನ ಸ್ಥಾನ ತಿಳಿಸುವ ವ್ಯವಸ್ಥೆ) ಅನ್ನು ಆಫ್ ಮಾಡಿತ್ತು ಮತ್ತು ಜಲಸಂಧಿಯನ್ನು ದಾಟಿದ ನಂತರ ಮತ್ತೆ ಆನ್ ಮಾಡಿದೆ ಎಂದು ಟ್ರ್ಯಾಕಿಂಗ್ ಸಾಫ್ಟ್‌ವೇರ್ ತೋರಿಸಿದೆ. ಈ ಹಡಗಿನ ನಿಖರ ಗಮ್ಯಸ್ಥಾನದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.