ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನಿರಾಕರಣೆ: ರಾಹುಲ್ ಗಾಂಧಿ
ನವದೆಹಲಿ: 'ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಬುಧವಾರ) ಆರೋಪಿಸಿದ್ದಾರೆ. 'ಸದನವು ಕೇವಲ ಒಂದು ಪಕ್ಷವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ಇಡೀ ದೇಶವನ್ನು ಪ್ರತಿನಿಧಿಸುತ್ತದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಪ್ರತಿಪಾದಿಸಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ರಾಹುಲ್, 'ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ. ಅದರಿಂದಾಗಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ' ಎಂದಿದ್ದಾರೆ.
'ಪ್ರಜಾಪ್ರಭುತ್ವ ಮತ್ತು ಸ್ಪೀಕರ್ ಜವಾಬ್ದಾರಿ ಬಗ್ಗೆ ಇಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಹಲವು ಬಾರಿ ನನ್ನ ಹೆಸರು ಎತ್ತಲಾಗಿದೆ. ನನ್ನ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಲಾಗುತ್ತಿದೆ. ಈ ಸದನವು ಒಂದು ಪಕ್ಷವನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಇಡೀ ದೇಶವನ್ನು ಪ್ರತಿನಿಧಿಸುತ್ತದೆ' ಎಂದು ಉಲ್ಲೇಖಿಸಿದ್ದಾರೆ. 'ನಾನು ಪ್ರತಿ ಸಲವೂ ಮಾತನಾಡಲು ಮುಂದಾದಾಗ ನನ್ನನ್ನು ತಡೆಯಲಾಗುತ್ತಿದೆ. ಕೊನೆಯ ಬಾರಿ ಮಾತನಾಡಿದಾಗ ಪ್ರಧಾನಿ ಮಾಡಿದ ರಾಜಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದೆ. ಆದರೆ ನನ್ನನ್ನು ಮಾತನಾಡಲು ಬಿಡಲಿಲ್ಲ.
ಸದನದ ಇತಿಹಾಸದಲ್ಲೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಿರಲಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
'ನಾನು ಸೇನೆಯ ಮಾಜಿ ಮುಖ್ಯಸ್ಥ ನರವಣೆ ವಿಷಯವನ್ನು ಎತ್ತಿದೆ. ನಾನು ಎಪ್‌ಸ್ಟೈನ್ ವಿಷಯವನ್ನು ಎತ್ತಿದೆ. ನಾನು ಅದಾನಿ ವಿಷಯವನ್ನು ಎತ್ತಿದೆ. ಆದರೆ ನನ್ನನ್ನು ಮಾತನಾಡಲು ಬಿಡಲಿಲ್ಲ. ಇವೆಲ್ಲವೂ ಜನರ ಮೂಲಭೂತ ಸಮಸ್ಯೆಗಳಾಗಿವೆ. ನಮ್ಮ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ. ಅದರ ಫಲಿತಾಂಶ ಏನೆಂಬುದು ಎಲ್ಲರಿಗೂ ಗೊತ್ತಿದೆ' ಎಂದಿದ್ದಾರೆ.