ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ : ಅಶೋಕ್
ವಿಧಾನಸಭೆ : ಸಾಲದ ಮೂಲಕ ರಾಜ್ಯ ಬಜೆಟ್ ಮಂಡಿಸಲಾಗಿದ್ದು, ಇದು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ತೋರಿಸುತ್ತದೆ. 2026-27ನೇ ಸಾಲಿನ ಬಜೆಟ್ ಖಾಲಿ ಚೊಂಬಿನಂತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಆರ್.ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1994ರಲ್ಲಿ ತಮ್ಮ ಮೊದಲ ಬಾರಿ ಮಂಡಿಸಿದ ಬಜೆಟ್ ಇದಕ್ಕಿಂತ ಉತ್ತಮವಾಗಿತ್ತು. ಇನ್ನು, 1995-96ರ ಬಜೆಟ್‌ನಲ್ಲೂ ಆಗಿನ ಕೇಂದ್ರ ಸರ್ಕಾರ ಮತ್ತು 10ನೇ ಹಣಕಾಸು ಆಯೋಗದ ವಿರುದ್ಧ ಆರೋಪಗಳನ್ನು ಮಾಡಿದ್ದರು. ಈಗಿನ ಬಜೆಟ್‌ನಲ್ಲೂ ಕೇಂದ್ರ ಸರ್ಕಾರದ ಮೇಲೆ ಆರೋಪಿಸುವ ಚಾಳಿ ಮುಂದುವರಿಸಿದ್ದಾರೆ.
2026-27ನೇ ಸಾಲಿನ ಬಜೆಟ್ ಅನ್ನು 11ಜಿ ಅಡಿ ಮಂಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಯಾವ ಕ್ಷೇತ್ರದಲ್ಲೂ ಉತ್ತಮ ಯೋಜನೆಗಳನ್ನೂ ಘೋಷಿಸಿಲ್ಲ. ಎಲ್ಲವನ್ನೂ ಸಾಲ ಪಡೆದು ಮಾಡುತ್ತೇವೆ ಎಂದು ಹೇಳಿದ್ದು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ ಎಂದರು. 2023ರಲ್ಲಿ ಬಿಜೆಪಿ ಸರ್ಕಾರ ಮಂಡಿಸಿದ ಅಂತಿಮ ಬಜೆಟ್ ಉಳಿತಾಯ ಬಜೆಟ್ ಆಗಿತ್ತು. ಅದಾದ ನಂತರ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ಗಳು ಕೊರತೆ ಬಜೆಟ್‌ಗಳಾಗಿವೆ. ಕಳೆದ ಮೂರು ವರ್ಷಗಳಲ್ಲಿ 54,660 ವಿತ್ತೀಯ ಕೊರತೆ ಕಾಣಿಸಿಕೊಂಡಿದೆ. ಕಾಂಗ್ರೆಸ್ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.