ಕೀವ್: ರಷ್ಯಾ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಉಕ್ರೇನ್ ಸೇನೆ ಬಳಸುತ್ತಿರುವ ಶೇ 60 ರಷ್ಟು ಶಸ್ತ್ರಾಸ್ತ್ರಗಳು ಸ್ವದೇಶಿ ನಿರ್ಮಿತವಾದವು ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಹೇಳಿದ್ದಾರೆ.
ಶನಿವಾರ ರಾತ್ರಿ ಪ್ರಕಟವಾಗಿರುವ ವಿಡಿಯೊ ಭಾಷಣದಲ್ಲಿ, 'ಶಸ್ತ್ರಾಸ್ತ್ರಗಳು ಅತ್ಯಂತ ಶಕ್ತಿಶಾಲಿಯಾಗಿದ್ದು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ' ಎಂದು ಹೇಳಿಕೊಂಡಿದ್ದಾರೆ. ಡೆನ್ಮಾರ್ಕ್‌ನಲ್ಲಿ ಜಂಟಿಯಾಗಿ ಶಸ್ತ್ರಾಸ್ತ್ರ ಉತ್ಪಾದನೆ ಆರಂಭಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಝೆಲೆನ್‌ಸ್ಕಿ ಹಾಗೂ ಇತರ ಕೆಲವು ಹಿರಿಯ ಅಧಿಕಾರಿಗಳು, ಭವಿಷ್ಯದಲ್ಲಿ ಉಕ್ರೇನ್‌ಗೆ ರಕ್ಷಣೆಯನ್ನು ಖಾತ್ರಿಪಡಿಸುವ ಸಲುವಾಗಿ ದೇಶೀಯವಾಗಿ ಶಸ್ತ್ರಾಸ್ತ್ರಗಳ ತಯಾರಿಯನ್ನು ಗಣನೀಯವಾಗಿ ಹೆಚ್ಚಿಸುವುದಕ್ಕೆ ಹಿಂದಿನಿಂದಲೂ ಆದ್ಯತೆ ನೀಡುತ್ತಿದ್ದಾರೆ.