KPSC Scam: ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ರಚನೆ; 100 ದಿನದೊಳಗೆ ವರದಿಗೆ ಸೂಚನೆ
ಬೆಂಗಳೂರು: ದೇಶದ ಗಮನ ಸೆಳೆದಿದ್ದ ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ (ಸೆ.21) ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಹೈಕೋರ್ಟ್ ಪೀಠವು ಪ್ರಕರಣದ ಸಮಗ್ರ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಹೈಕೋರ್ಟ್ ಪೀಠ ಆದೇಶಿಸಿದೆ.
ಸಿಐಡಿ ಅಥವಾ ಸಿಬಿಐ ತನಿಖೆಗೆ ನಿರಾಕರಿಸಿದ ಹೈಕೋರ್ಟ್ ಪೀಠವು, ನೂರು ದಿನದೊಳಗೆ ಎಸ್‌ಐಟಿ ತನಿಖಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಹಗರಣದ ಬೇರುಗಳನ್ನು ತಲುಪಿ ಸತ್ಯಾಸತ್ಯತೆ ಹೊರತರುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.
ಸಿಐಡಿ ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ದಾಖಲೆಯನ್ನು ಎಸ್‌ಐಟಿಗೆ ನೀಡಬೇಕು. ಒಂದು ವಾರದೊಳಗೆ ಎಲ್ಲಾ ದಾಖಲೆ ಹಸ್ತಾಂತಿಸಬೇಕು. ಎಸ್‌ಐಟಿಗೆ ರಾಜ್ಯ ಸರ್ಕಾರವು ಪೊಲೀಸ್ ಠಾಣೆ ಸ್ಥಾನಮಾನ ನೀಡಬೇಕು. ತನಿಖೆಗೆ ಯಾವುದೇ ಅಡ್ಡಿ ಉಂಟುಮಾಡಬಾರದು ಎಂದು ಪೀಠ ಹೇಳಿದೆ. ಅಲ್ಲದೆ ಪ್ರತಿ 30 ದಿನದಲ್ಲಿ ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದೆ.