ಕೆಪಿಎಸ್‌ಸಿಗೆ ಬೀಗ ಜಡಿಯಲು ಚಿಂತನೆ: ಸಿಎಂ
ಬೆಂಗಳೂರು: ಕೆಎಎಸ್ ಪರೀಕ್ಷೆ ಗಳಲ್ಲಿ ಅಕ್ರಮದ ಜತೆಗೆ ಇತ್ತೀಚೆಗೆ ಪಶುವೈದ್ಯಾಧಿ ಕಾರಿಗಳ ನೇಮಕಾತಿ ಹಗರಣದಿಂದ ತೀವ್ರ ವಿವಾದಕ್ಕೆ ಸಿಲುಕಿರುವ ಕೆಪಿಎಸ್‌ಸಿಗೆ ಬೀಗ ಹಾಕಲು ಸರಕಾರ ಗಂಭೀರ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದೆ. ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಈ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಾ| ಬಿ.ಎಲ್. ಶಂಕರ್ ನೇತೃತ್ವದ ಕಾಂಗ್ರೆಸ್‌ನ ಹಿರಿಯ ನಾಯಕರ ನಿಯೋಗವು ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಅಕ್ರಮ- ಹಗರಣಗಳ ಸುಳಿಗೆ ಸಿಲುಕಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಾಯಕಲ್ಪ ಮಾಡಬೇಕೆಂದು ಆಗ್ರಹಿಸಿದ ಬೆನ್ನಲ್ಲೇ ಈಗ ಕೆಪಿಎಸ್‌ಸಿಯನ್ನು ಶಾಶ್ವತವಾಗಿ ಮುಚ್ಚಲು ಸರಕಾರ ಮುಂದಾಗಿದೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಡಿಕೆಶಿ, ಕೆಪಿಎಸ್‌ಸಿಯಲ್ಲಿ ಖದೀಮರು ಸೇರಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಿಗಳು ಹೀಗೆಲ್ಲ ಮಾಡುತ್ತಿದ್ದಾರೆ ಎಂದರು.