ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ: ಅನಂತ್ ನಾಗ್
ವಡೋದರಾ: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಯನ್ನು ಮಂಗಳವಾರ ಗುಜರಾತ್‌ನ ವಡೋದರದಲ್ಲಿ ಪ್ರದಾನ ಮಾಡಲಾಗಿದೆ. ಈ ಬಾರಿ ಕನ್ನಡಕ್ಕೆ 4 ಪ್ರಶಸ್ತಿ ದೊರೆತಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. ಮೇರು ನಟ ಅನಂತ್ ನಾಗ್‌ಗೆ 2024ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾರತ ನನ್ನ ಜನ್ಮಭೂಮಿ
ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿರುವ ನಟ ಅನಂತ್, "ಭಾರತ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ. ಹಾಗೆಯೇ ಇದು ಧರ್ಮಭೂಮಿಯೂ ಹೌದು. ಮುಂಬೈನಲ್ಲಿ ರಂಗಭೂಮಿ ಮೂಲಕ ನಟನೆ ಆರಂಭಿಸಿದೆ. ಬಳಿಕ ಕನ್ನಡದಲ್ಲಿ ಅವಕಾಶ ದೊರೆಯಿತು. ನಂತರದ ವರ್ಷಗಳಲ್ಲಿ ಇತರೆ ಭಾಷೆಗಳಲ್ಲೂ ನಟಿಸಿದೆ. ಕೊನೆಗೆ ಕರ್ನಾಟಕವೇ ನನ್ನ ಕರ್ಮಭೂಮಿಯಾಯಿತು. ಕಳೆದ ವರ್ಷ, ರಾಷ್ಟ್ರಪತಿಯಿಂದ ಪದ್ಮಭೂಷಣ ಪ್ರಶಸ್ತಿ ಪಡೆದೆ. ಈ ಬಾರಿ ಫಾಲ್ಕೆ ಪ್ರಶಸ್ತಿ ಪಡೆದಿರುವುದು ಖುಷಿ ಇದೆ ಎಂದಿದ್ದಾರೆ.
ಕನ್ನಡದ ಅತ್ಯುತ್ತಮ ಚಿತ್ರವಾಗಿ ಸುಮಂತ್ ಭಟ್ ಚೊಚ್ಚಲ ನಿರ್ದೇಶನದ "ಮಿಥ್ಯ' ಚಿತ್ರ ಆಯ್ಕೆಯಾಗಿತ್ತು. ಈ ಚಿತ್ರವನ್ನು ನಟ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಒಟ್ಟು 3 ಪ್ರಶಸ್ತಿ ದೊರೆತಿದ್ದು, ಬಾಲನಟ ಅತೀಶ್ ಶೆಟ್ಟಿಗೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಬಾಲನಟ ಪ್ರಶಸ್ತಿ, ರೂಪಶ್ರೀ ವರ್ಕಾಡಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿದೆ.