ಮೂಲ ಸೌಲಭ್ಯಕ್ಕೆ ಒತ್ತಾಯ: ಬಾಗಲಕೋಟೆಯಿಂದ ಬೆಂಗಳೂರಿಗೆ ಕೊಣ್ಣೂರು ಜನರ ಪಾದಯಾತ್ರೆ
ಜಮಖಂಡಿ: ತಾಲ್ಲೂಕಿನ ಕೊಣ್ಣೂರ ಗ್ರಾಮದ ವಿವಿಧ ಬೇಡಿಕೆಗಳಿಗೆ ಹಲವಾರು ಹೋರಾಟ ಮಾಡಿದರೂ ಜಿಲ್ಲಾಡಳಿತ ಸ್ಪಂದಿಸದ ಕಾರಣ ಸಿ.ಎಂ ಡಿಕೆ ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಲು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರುವರೆಗೆ ಪಾದಯತ್ರೆಗೆ ಗ್ರಾಮದ ಯುವಕರು, ಮಹಿಳೆಯರು ಚಾಲನೆ ನೀಡಿದರು.
ಮುಖಂಡ ಗದಿಗೆಪ್ಪ ಧಾರವಾಡ ಮಾತನಾಡಿ, ಕೊಣ್ಣೂರ ಗ್ರಾಮದ ಮಡ್ಡಿ ಪ್ಲಾಟ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಧರಣಿ ಸತ್ಯಗ್ರಹ ಸೇರಿದಂತೆ ಹಲವಾರು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ, ಗ್ರಾಮದ ರಸ್ತೆ ಅಭಿವೃದ್ಧಿ ಇಲ್ಲದ ಕಾರಣ ಸಂಚಾರ ದುಸ್ತರವಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ, ಪದವಿಪೂರ್ವ ಕಾಲೇಜು ಆರಂಭ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪಾದಯತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
67 ಜನರು 11 ದಿನಗಳ ಕಾಲ ಪಾದಯಾತ್ರೆ ಮೂಲಕ ಅ.2 ರಂದು ಬೆಂಗಳೂರು ತಲುಪುತ್ತೇವೆ. ಅಲ್ಲಿ ಫ್ರೀಡಂ ಪಾರ್ಕ್ನಲ್ಲಿ ಬೇಡಿಕೆ ಇರುವವರೆಗೆ ಧರಣಿ ನಡೆಸಲಾಗುವುದು ಎಂದರು.
ವೀರಣ್ಣ ಹಳೆಗೌಡರ, ಭೀರಪ್ಪ ಹೊರಟ್ಟಿ, ಸಿದ್ದಾರೂಡ ಪತ್ತಾರ, ಹಣಮಂತ ಬಸಣ್ಣವರ, ಮಲ್ಲವ್ವ ತಳವಾರ, ಕಮಲವ್ವ ತಾಯವ್ವಗೋಳ, ಗೌರವ್ವ ಮೇಟಿನ್, ತಂಗೆವ್ವ ಜೋತ್ಯಪ್ಪನವರ ಸೇರಿದಂತೆ ಇತರರು ಇದ್ದರು.