ವಿದ್ಯಾರ್ಥಿನಿಯರ ಹಾಸ್ಟೆಲ್ ಕೊರತೆ ನೀಗಿಸಿ: ಪ್ರಧಾನಿ ಮೋದಿಗೆ ರಾಹುಲ್ ಒತ್ತಾಯ
ನವದೆಹಲಿ: ದೇಶದಲ್ಲಿ ಅನೇಕ ವಿದ್ಯಾರ್ಥಿನಿಯರು ಹಾಸ್ಟೆಲ್ ಸೌಲಭ್ಯದ ಕೊರತೆಯಿಂದಾಗಿ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ‘ಈ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಇಂದೋರ್‌ನಲ್ಲಿ ಶನಿವಾರ ನಡೆದ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಪ್ರತಿಧ್ವನಿ) ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಉಲ್ಲೇಖಿಸಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸರ್ಕಾರದ ಬಳಿ ದೀಪಗಳನ್ನು ಬೆಳಗಿಸಲು ಹಣವಿದೆ. ಆದರೆ ಹೆಚ್ಚಿನ ಹಾಸ್ಟೆಲ್‌ಗಳನ್ನು ನಿರ್ಮಿಸಲು ಏಕೆ ಹಣವಿಲ್ಲ ಎಂಬ ಪ್ರಶ್ನೆಯನ್ನು ಇಂದೋರ್‌ನಲ್ಲಿ ವಿದ್ಯಾರ್ಥಿನಿಯೊಬ್ಬರು ನನ್ನನ್ನು ಕೇಳಿದರು. ಅವರು ಓದಲು ಗ್ರಾಮದಿಂದ ನಗರಕ್ಕೆ ಬಂದ ವಿದ್ಯಾರ್ಥಿನಿ’ ಎಂದು ರಾಹುಲ್ ಅವರು ಸಂವಾದವನ್ನು ನೆನಪಿಸಿಕೊಳ್ಳುತ್ತಾ ಹೇಳಿದ್ದಾರೆ.
‘ಹಾಸ್ಟೆಲ್ ಇಲ್ಲದ ಕಾರಣ ಆ ವಿದ್ಯಾರ್ಥಿನಿ ಪಿ.ಜಿಯಲ್ಲಿ ಉಳಿಯಬೇಕಾಗಿದೆ. ಸುರಕ್ಷಿತವಾಗಿರಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿದೆ. ಮಾಸಿಕ ಬಾಡಿಗೆ ಚಿಂತೆ ಮತ್ತು ವಸತಿ ಕಳೆದುಕೊಳ್ಳವ ಭಯದ ನಡುವೆಯೇ ಅವರು ಓದಬೇಕಾಗಿದೆ’ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.