ನಿಷೇಧಿತ ಉಗ್ರ ಸಂಘಟನೆಗಳ ಪಟ್ಟಿಗೆ ಎಸ್ಬಿಎನ್: ಗೃಹ ಸಚಿವ ಅಮಿತ್ ಶಾ
ನವದೆಹಲಿ: ‘ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ ಜಾಲವನ್ನು (ಎಸ್ಬಿಎನ್) ಉಗ್ರ ಸಂಘಟನೆ ಎಂದು ಘೋಷಿಸಲಾಗಿದ್ದು, ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ತಿಳಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದ್ದು, ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅಡಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.
‘ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಣೆ ಮಾಡುವುದು ಹಾಗೂ ಯುವಕರು ಮತ್ತು ಚಿಕ್ಕ ಪುಟ್ಟ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದವರನ್ನು ಭಯೋತ್ಪಾದನೆಯಲ್ಲಿ ಭಾಗಿಯಾಗುವಂತೆ ಈ ಸಂಘಟನೆಯು ಪ್ರಚೋದಿಸುತ್ತದೆ. ಭಾರತದ ಪ್ರಜಾಪ್ರಭುತ್ವದ ಅಡಿಪಾಯ ಮತ್ತು ಕೋಮು ಸಾಮರಸ್ಯವನ್ನು ಗುರಿಯಾಗಿಸಿಕೊಂಡಿರುವ ಸಂಘಟನೆಯು ದ್ವೇಷ ಬಿತ್ತುವ ವಿಚಾರಗಳನ್ನು ಡಿಜಿಟಲ್ ಸ್ವರೂಪದಲ್ಲೂ ಪ್ರಚುರಪಡಿಸುತ್ತಿದೆ’ ಎಂದು ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.