ರಷ್ಯಾ ನಿರ್ಬಂಧ ಮಸೂದೆಗೆ ಅಮೆರಿಕ ಒಪ್ಪಿಗೆ: ಭಾರತದ ಮೇಲೆ ಭಾರಿ ಸುಂಕದ ಸಾಧ್ಯತೆ
ವಾಷಿಂಗ್ಟನ್: ರಷ್ಯಾ ಹಾಗೂ ಅದರಿಂದ ತೈಲ ಖರೀದಿ ಮಾಡುವ ರಾಷ್ಟ್ರಗಳ ಮೇಲೆ ಭಾರಿ ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಮಸೂದೆಗೆ ಅಮೆರಿಕ ಸಂಸತ್ತಿನ ಕೆಳಮನೆ (ಪ್ರತಿನಿಧಿಗಳ ಸಭೆ) ಒಪ್ಪಿಗೆ ನೀಡಿದೆ. ಇದರಿಂದ ಭಾರತ, ಚೀನಾ ಸೇರಿ ಹಲವು ರಾಷ್ಟ್ರಗಳ ಮೇಲೆ ಭಾರಿ ತೆರಿಗೆ ವಿಧಿಸಲು ಟ್ರಂಪ್‌ಗೆ ಅಧಿಕಾರ ಸಿಕ್ಕಂತಾಗಿದೆ.
ರಷ್ಯಾ ಹಾಗೂ ಇರಾನ್ ಮೇಲೆ ನಿರ್ಬಂಧ ವಿಧಿಸುವ ಲಿಂಡ್ಸೆ ಒ ಗ್ರಹಾಮ್ ಕಾಯ್ದೆಗೆ ಕಳೆದ ತಿಂಗಳು ಮೇಲ್ಮನೆ (ಸೆನೆಟ್) ಒಪ್ಪಿಗೆ ನೀಡಿತ್ತು. ಬುಧವಾರ ಕೆಳಮನೆ 262-159 ಬಹುಮತದಿಂದ ಮಸೂದೆಗೆ ಒಪ್ಪಿಗೆಯ ಮುದ್ರೆ ಒತ್ತಿದೆ. ಅಧ್ಯಕ್ಷರ ಅಂಕಿತ ಬಿದ್ದರೆ ಕಾನೂನು ಜಾರಿಗೆ ಬರುತ್ತದೆ.
203 ರಿಪಬ್ಲಿಕನ್ನರು, 58 ಡೆಮಾಕ್ರಟರ್‌ಗಳು ಹಾಗೂ ಓರ್ವ ಪಕ್ಷೇತರ ಸಂಸದ ಮಸೂದೆಯ ಪರ ಮತ ಹಾಕಿದರೆ, 7 ರಿಪಬ್ಲಿಕನ್ನರು ಹಾಗೂ 152 ಡೆಮಾಕ್ರಟ್‌ಗಳು ವಿರೋಧಿಸಿದರು.
ಟ್ರಂಪ್ ಅವರಿಗೆ ಸುಂಕ ವಿಧಿಸುವ ಅವಕಾಶ ನೀಡುವುದಕ್ಕೆ ಡೆಮಾಕ್ರಟ್ ಸಂಸದರು ವಿರೋಧ ದಾಖಲಿಸಿದ್ದರು.