ಮತ್ತೆ ಗಾಯಗೊಂಡ ವರುಣ್ ಚಕ್ರವರ್ತಿ: ಅಫ್ಘಾನ್ ಸರಣಿಯಿಂದ ಔಟ್!
ಹೊಸದಿಲ್ಲಿ: ಗಾಯದ ಕಾರಣದಿಂದ ಎರಡು ತಿಂಗಳ ಬಿಡುವಿನ ಬಳಿಕ ಮತ್ತೆ ಕ್ರಿಕೆಟ್ ಗೆ ಮರಳಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತೆ ಗಾಯಗೊಂಡಿದ್ದಾರೆ. ಅವರು ಅಫ್ಘಾನಿಸ್ತಾನ ವಿರುದ್ಧದ ಪ್ರಸ್ತುತ ಟ್ವೆಂಟಿ-20 ಅಂತಾರಾಷ್ಟ್ರೀಯ ಸರಣಿಯಿಂದ ಹೊರಗುಳಿದಿದ್ದಾರೆ ಮತ್ತು ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಅವರ ಭಾಗವಹಿಸುವಿಕೆ ಅನುಮಾನಾಸ್ಪದವಾಗಿದೆ.
ಭಾನುವಾರ (ಸೆ.13) ರಾತ್ರಿಯ ಪಂದ್ಯದ ನಂತರ ಚಕ್ರವರ್ತಿ ಅವರು ಪಕ್ಕೆಲುಬಿನ ಸ್ನಾಯು ಸೆಳೆತದ (side strain) ಬಗ್ಗೆ ದೂರು ನೀಡಿದ್ದರು. ಹೀಗಾಗಿ, ತಂಡದ ಆಡಳಿತ ಮಂಡಳಿಯು ಅವರನ್ನು ತಕ್ಷಣವೇ ತಂಡದಿಂದ ಬಿಡುಗಡೆ ಮಾಡಲು ನಿರ್ಧರಿಸಿದೆ. ಮುಂದಿನ 24 ರಿಂದ 48 ಗಂಟೆಗಳ ಅವಧಿಯಲ್ಲಿ ಅವರು 'ಸೆಂಟರ್ ಆಫ್ ಎಕ್ಸಲೆನ್ಸ್' ವೈದ್ಯಕೀಯ ತಂಡವನ್ನು ಭೇಟಿಯಾಗಲು ಬೆಂಗಳೂರಿಗೆ ಪ್ರಯಾಣಿಸಲಿದ್ದು, ಆ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಅವರ ಭಾಗವಹಿಸುವಿಕೆಯ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು CoE ವ್ಯವಸ್ಥಾಪಕರು ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲಿದ್ದಾರೆ ಎಂದು ವರದಿ ಹೇಳಿದೆ.
ಭಾರತೀಯ ತಂಡವು ಸೆಪ್ಟೆಂಬರ್ 18 ರಂದು ನವದೆಹಲಿಯಿಂದ ಜಪಾನ್‌ಗೆ ಪ್ರಯಾಣ ಬೆಳೆಸಲಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮೊದಲ ಪಂದ್ಯವು ಸೆಪ್ಟೆಂಬರ್ 28 ರಂದು ನಡೆಯಲಿದೆ.
ಭಾನುವಾರ ರಾತ್ರಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನ್ ವಿರುದ್ದದ ಪಂದ್ಯದಲ್ಲಿ ಚಕ್ರವರ್ತಿ ತಮ್ಮ ಪಾಲಿನ ನಾಲ್ಕು ಓವರ್‌ಗಳನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಅವರು 16 ರನ್‌ಗಳಿಗೆ ಒಂದು ವಿಕೆಟ್ ಪಡೆದರು.
ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಟಿ20ಐ ಸರಣಿಯ ನಡುವೆಯೇ ಸ್ನಾಯು ಸೆಳೆತದ (ಹ್ಯಾಮ್‌ಸ್ಟ್ರಿಂಗ್) ಗಾಯದ ಕಾರಣದಿಂದ ಚಕ್ರವರ್ತಿ ವಾಪಸಾಗಬೇಕಾಯಿತು. ನಂತರ ಜಿಂಬಾಬ್ವೆಯಲ್ಲಿ ನಡೆದ ಸರಣಿಯನ್ನು ತಪ್ಪಿಸಿಕೊಳ್ಳಬೇಕಾಯಿತು. ಅವರು ಸುಮಾರು ಎರಡು ತಿಂಗಳುಗಳ ಕಾಲ ಸಿಒಇ (CoE) ನಲ್ಲಿ ಕಳೆದರು. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅಫ್ಘಾನಿಸ್ತಾನ ಸರಣಿ ಹಾಗೂ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗಿದ್ದರು.