FIFA World Cup :ಎಂಬಾಪ್ಪೆ ಬಳಗಕ್ಕೆ ಬಿಗ್ ಶಾಕ್ ನೀಡಿ ಫೈನಲ್‌ಗೆ ಲಗ್ಗೆ ಇಟ್ಟ ಸ್ಪೇನ್
ಅಟ್ಲಾಂಟಾ/ಡಲ್ಲಾಸ್: ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ಆತಿಥ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ತನ್ನ ಪ್ರಭಾವಿ ಪ್ರದರ್ಶನದ ಮೂಲಕ ಫ್ರಾನ್ಸ್‌ಗೆ 2-0 ಗೋಲುಗಳಿಂದ ಸೋಲುಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಟೂರ್ನಿಯುದ್ದಕ್ಕೂ ಅತ್ಯಂತ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಕೈಲಿಯನ್ ಎಂಬಾಪ್ಪೆ ನೇತೃತ್ವದ ಫ್ರಾನ್ಸ್ ವಿರುದ್ಧ ಸ್ಪೇನ್ ಸಂಪೂರ್ಣ ಹಿಡಿತ ಸಾಧಿಸಿ ಗೆಲುವಿನ ನಗೆ ಬೀರಿತು. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದ ಪಂದ್ಯದಲ್ಲಿ ಲೂಯಿಸ್ ಡೆ ಲಾ ಫುವೆಂಟೆ ಅವರ ತಂಡ ಫ್ರಾನ್ಸ್‌ನ ಆಕ್ರಮಣಕಾರಿ ಆಟಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. ಪಂದ್ಯದ 22ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಮಿಕೆಲ್ ಒಯಾರ್ಜಬಲ್ ಗೋಲಾಗಿ ಪರಿವರ್ತಿಸಿ ಸ್ಪೇನ್‌ಗೆ ಮುನ್ನಡೆ ತಂದುಕೊಟ್ಟರು. ಬಳಿಕ 58ನೇ ನಿಮಿಷದಲ್ಲಿ ಪೆಡ್ರೊ ಪೊರೊ ಮತ್ತೊಂದು ಗೋಲು ದಾಖಲಿಸಿ ಸ್ಪೇನ್‌ನ ಮುನ್ನಡೆಯನ್ನು ದ್ವಿಗುಣಗೊಳಿಸಿದರು.
ಹಿಡಿತದ ಆಟದಿಂದ ಸ್ಪೇನ್ ಮೇಲುಗೈ ಈ ವಿಶ್ವಕಪ್‌ನಲ್ಲಿ ಕಿಲಿಯನ್ ಎಂಬಾಪ್ಪೆ, ಉಸ್ಮಾನ್ ಡೆಂಬೆಲೆ ಹಾಗೂ ಮೈಕಲ್ ಒಲೀಸ್ ಅವರ ವೇಗದ ಆಕ್ರಮಣಗಳ ನೆರವಿನಿಂದ ಎದುರಾಳಿಗಳನ್ನು ಮಣಿಸಿದ್ದ ಫ್ರಾನ್ಸ್‌ಗೆ ಸ್ಪೇನ್ ಅವಕಾಶವೇ ನೀಡಲಿಲ್ಲ. ಪಂದ್ಯದ ಆರಂಭದಿಂದಲೇ ಚೆಂಡಿನ ನಿಯಂತ್ರಣ ತನ್ನಲ್ಲೇ ಇಟ್ಟುಕೊಂಡ ಸ್ಪೇನ್, ಫ್ರಾನ್ಸ್ ದಾಳಿಗಳಿಗೆ ಜಾಗ ನೀಡದೆ ರಕ್ಷಣಾ ವಿಭಾಗವನ್ನು ಗಟ್ಟಿಯಾಗಿ ಕಟ್ಟಿಹಾಕಿತು. ಎಂಬಾಪ್ಪೆ ಚೆಂಡಿನ ಸ್ಪರ್ಶಕ್ಕಾಗಿ ಮೈದಾನದ ಒಂದು ಬದಿಯಿಂದ ಮತ್ತೊಂದು ಬದಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಡೆಂಬೆಲೆ ಮಧ್ಯಭಾಗಕ್ಕೆ ಇಳಿದು ಆಟ ನಿರ್ಮಿಸಲು ಯತ್ನಿಸಿದರೂ ಸ್ಪೇನ್‌ನ ಒತ್ತಡದ ಎದುರು ಫಲ ನೀಡಲಿಲ್ಲ. ಟೂರ್ನಿಯಲ್ಲಿ ಮೊದಲ ಬಾರಿಗೆ ಫ್ರಾನ್ಸ್ ಸೃಜನಾತ್ಮಕತೆಯ ಕೊರತೆಯಿಂದ ಬಳಲಿದಂತೆ ಕಂಡಿತು. ಅಂಕಿ-ಅಂಶಗಳಲ್ಲೂ ಸ್ಪೇನ್ ಮೇಲುಗೈ ಪಂದ್ಯದಲ್ಲಿ ಸ್ಪೇನ್ ಮೂರು ಸ್ಪಷ್ಟ ಗೋಲು ಅವಕಾಶಗಳನ್ನು ಸೃಷ್ಟಿಸಿದರೆ, ಫ್ರಾನ್ಸ್‌ಗೆ ಒಂದೂ ದೊಡ್ಡ ಅವಕಾಶ ದೊರೆಯಲಿಲ್ಲ.
ನಿರೀಕ್ಷಿತ ಗೋಲುಗಳ (Expected Goals) ಅಂಕಿಯಲ್ಲಿ ಸ್ಪೇನ್ 1.63 ದಾಖಲಿಸಿದರೆ, ಫ್ರಾನ್ಸ್ ಕೇವಲ 0.30ಕ್ಕಷ್ಟೇ ಸೀಮಿತವಾಯಿತು. ಫ್ರಾನ್ಸ್‌ನ ಪ್ರಬಲ ದಾಳಿಯನ್ನು ಕೇವಲ ಮೂರು ಗುರಿಯತ್ತದ ಶಾಟ್‌ಗಳಿಗೆ ಮಾತ್ರ ಸೀಮಿತಗೊಳಿಸುವಲ್ಲಿ ಸ್ಪೇನ್ ಯಶಸ್ವಿಯಾಯಿತು. ಫೈನಲ್‌ನಲ್ಲಿ ಯಾರು? ಈ ಗೆಲುವಿನೊಂದಿಗೆ ಸ್ಪೇನ್ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದ್ದು, ಬುಧವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ನ ವಿಜೇತ ತಂಡವಾದ ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದೆ. ಫ್ರಾನ್ಸ್ ಸತತ ಮೂರನೇ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸುವ ಕನಸು ಕಂಡಿದ್ದರೂ, ಸಂಘಟಿತ ಹಾಗೂ ಸಮತೋಲಿತ ಪ್ರದರ್ಶನ ನೀಡಿದ ಸ್ಪೇನ್ ಆ ಕನಸಿಗೆ ತೆರೆ ಎಳೆದಿದೆ.