NEET-UG re-test: ಜೂನ್ 22ರವರೆಗೆ ಟೆಲಿಗ್ರಾಮ್ ನಿರ್ಬಂಧಿಸಿದ ಕೇಂದ್ರ
ನವದೆಹಲಿ: ನೀಟ್–ಯುಜಿ ಮರುಪರೀಕ್ಷೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳೂ ಸೋರಿಕೆಯಾಗಿವೆ ಎಂಬ ವದಂತಿಗಳು ಹರಿದಾಡುತ್ತಿರುವುದರ ನಡುವೆ, ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ದೇಶದಾದ್ಯಂತ ಜೂನ್ 22ರವರೆಗೆ ಟೆಲಿಗ್ರಾಮ್ ಬಳಕೆ ನಿರ್ಬಂಧಿಸಿದೆ. ಮೇ 3ರಂದು ನಡೆದ ನೀಟ್–ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ದೇಶದಾದ್ಯಂತ ಸಂಚಲನ ಮೂಡಿಸಿದೆ. ಹೀಗಾಗಿ, ಜೂನ್ 21ರಂದು ಮರುಪರೀಕ್ಷೆ ನಿಗದಿಯಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಮರುಪರೀಕ್ಷೆ ವೇಳೆ ಯಾವುದೇ ದೋಷವಾಗದಂತೆ ಎಚ್ಚರ ವಹಿಸಲಾಗಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜೂನ್ 22ರವರೆಗೆ ಟೆಲಿಗ್ರಾಮ್ ಸ್ಥಗಿತಗೊಳಿಸಿದೆ. ವಂಚಕರು ಅಕ್ರಮವೆಸಗಲು ಹಾಗೂ ವಿದ್ಯಾರ್ಥಿಗಳನ್ನು ವಂಚಿಸಲು ನಡೆಸುತ್ತಿರುವ ಸಂಘಟಿತ ಪ್ರಯತ್ನಗಳನ್ನು ತಡೆಯುವ ಸಲುವಾಗಿ, ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.