ಕೊನೆಗೂ ತೆರೆಯಿತು ಸಿಬಿಎಸ್‌ಇ ಪೋರ್ಟಲ್: ಅರ್ಜಿ ಸಲ್ಲಿಕೆ ಹೇಗೆ? ಎಂಬಿತ್ಯಾದಿ ವಿವರ
ನವದೆಹಲಿ: 12ನೇ ತರಗತಿಯ ಉತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಸೇರಿದಂತೆ ಫಲಿತಾಂಶದ ನಂತರದ ಚಟುವಟಿಕೆಗಳಿಗಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಪೋರ್ಟಲ್ ಮಂಗಳವಾರ ಕಾರ್ಯಾರಂಭ ಮಾಡಿದೆ. ಡಿಜಿಟಲ್ ಮೌಲ್ಯಮಾಪನಕ್ಕಾಗಿ ಪರಿಚಯಿಸಲಾದ ‘ಆನ್ ಸ್ಕ್ರೀನ್ ಮಾರ್ಕಿಂಗ್’ (ಒಎಸ್‌ಎಂ) ವ್ಯವಸ್ಥೆ– ಆನ್‌ಮಾರ್ಕ್ ಪೋರ್ಟಲ್‌ನಲ್ಲಿ ದೋಷ ಕಂಡುಬಂದಿತ್ತು. ಈ ಕುರಿತು ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಗದಿತ ದಿನಾಂಕಕ್ಕಿಂತ ಕೆಲವು ದಿನಗಳ ತಡವಾಗಿ ಈ ಪೋರ್ಟಲ್ ಅನ್ನು ಸಿಬಿಎಸ್‌ಇ ಆರಂಭಿಸಿದೆ.
ವಿದ್ಯಾರ್ಥಿಗಳು ಈಗಾಗಲೇ ಮೌಲ್ಯಮಾಪನ ಮಾಡಿದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆದಿದ್ದು, ವ್ಯತ್ಯಾಸಗಳ ಪರಿಶೀಲನೆ ಅಥವಾ ಮರುಮೌಲ್ಯಮಾಪನಕ್ಕಾಗಿ ಮೀಸಲಾದ ಅಧಿಕೃತ ಪೋರ್ಟಲ್ cbse.gov.in/newsite_old/rchk.html ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಿಬಿಎಸ್‌ಇ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಪೋರ್ಟಲ್ ಜೂನ್ 6ರ (ಶನಿವಾರ) ಮಧ್ಯರಾತ್ರಿಯವರೆಗೆ ತೆರೆದಿರುತ್ತದೆ ಎಂದೂ ಸಿಬಿಎಸ್‌ಇ ಮಾಹಿತಿ ನೀಡಿದೆ. ಆದಾಗ್ಯೂ, ಶುಲ್ಕ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ ಸಹ ಇನ್ನೂ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಯಾವುದೇ ಸ್ಪಷ್ಟನೆ ನೀಡಿಲ್ಲ.