ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?: ಗೌರವಯುತ ವಿದಾಯ ಬೇಕು ಎಂದು ನಿತಿನ್ ನಬಿನ್ ಜೊತೆ ಮಾತುಕತೆ!
ನವದೆಹಲಿ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರನಡೆಯುವುದು ಬಹುತೇಕ ಖಚಿತವಾಗಿದೆ. ಮಂಗಳವಾರ ಮುಂಜಾನೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿರುವ ಅಣ್ಣಾಮಲೈ, ತಮಗೆ ಪಕ್ಷದಿಂದ "ಗೌರವಯುತ ವಿದಾಯ" (Cordial Separation) ಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯಸಭಾ ಆಫರ್ ತಿರಸ್ಕರಿಸಿದ ಸಿಂಗಂ: ಮೂಲಗಳ ಪ್ರಕಾರ, ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಹೈಕಮಾಂಡ್ ತೀವ್ರ ಕಸರತ್ತು ನಡೆಸಿದೆ. ಇದರ ಭಾಗವಾಗಿ ಅವರಿಗೆ ಗೌರವಾನ್ವಿತ 'ರಾಜ್ಯಸಭಾ ಸದಸ್ಯತ್ವ'ದ ಆಫರ್ ಕೂಡ ನೀಡಲಾಗಿತ್ತು.
ಆದರೆ, ಅಣ್ಣಾಮಲೈ ಈ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸಿದ್ದು, ಬಿಜೆಪಿಯಲ್ಲಿ ತಮಗೆ ಭವಿಷ್ಯ ಕಾಣಿಸುತ್ತಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ತಾವು ಈಗಾಗಲೇ ದೃಢ ನಿರ್ಧಾರಕ್ಕೆ ಬಂದಿರುವುದಾಗಿ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೊಸ ಪಕ್ಷ ಕಟ್ಟಲಿದ್ದಾರಾ ಮಾಜಿ ಐಪಿಎಸ್? ಬಿಜೆಪಿಯಿಂದ ಹೊರಬಂದ ಬಳಿಕ ಅಣ್ಣಾಮಲೈ ಸ್ವಂತ ಹಾದಿ ಹಿಡಿಯಲಿದ್ದಾರೆ. ಆರಂಭದಲ್ಲಿ ಅವರು ಒಂದು ಸಾಮಾಜಿಕ ಚಳವಳಿಯನ್ನು ಮುನ್ನಡೆಸಿ, ತದನಂತರ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆಯಿದೆ.