ಕಪ್ಪು, ಬಿಳಿ ಬಟ್ಟೆ ಧರಿಸುವುದು ಏಕೆ ಎಂದು ವಿವರಿಸಿದ ತಮಿಳುನಾಡು ಸಿಎಂ ವಿಜಯ್
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಕಪ್ಪು–ಬಿಳಿ ಉಡುಪಿನಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಮೇ 10ರಂದು ನಡೆದ ಪ್ರಮಾಣವಚನ ಸಮಾರಂಭದಲ್ಲಿ ಬಿಳಿ ಅಂಗಿ, ಕಪ್ಪು ಕೋಟ್ ಮತ್ತು ಪ್ಯಾಂಟ್ ಧರಿಸಿ ಕಾಣಿಸಿಕೊಂಡದ್ದರು. ಇದು ಭಾರಿ ಚರ್ಚೆ ಹುಟ್ಟುಹಾಕಿತ್ತು. ಕಪ್ಪು ಬಣ್ಣವು ಹಲವು ವರ್ಷಗಳಿಂದ ದ್ರಾವಿಡ ಚಳವಳಿಯ ಸಂಕೇತವಾಗಿದೆ. ಪ್ರತಿಭಟನೆ, ವೈಚಾರಿಕತೆ, ಸಾಮಾಜಿಕ ನ್ಯಾಯ ಮತ್ತು ಜಾತಿ ವ್ಯವಸ್ಥೆ ವಿರುದ್ಧದ ನಿಲುವನ್ನು ಈ ಬಣ್ಣ ಪ್ರತಿನಿಧಿಸುತ್ತದೆ. ಕಪ್ಪು ವಸ್ತ್ರ ಧರಿಸುವುದರ ಹಿಂದೆ ‘ಪೆರಿಯಾರ್’ ಎಂದೇ ಜನಪ್ರಿಯರಾಗಿದ್ದ ಹಾಗೂ ‘ದ್ರಾವಿಡ ಕಳಗಂ’ ಸ್ಥಾಪಕ ಈರೋಡ್ ವೆಂಕಟಪ್ಪ ರಾಮಸಾಮಿ ಅವರ ಚಿಂತನೆಯೂ ಇದೆ. ಜಾತಿ ಹಾಗೂ ಸಾಮಾಜಿಕ ತಾರತಮ್ಯ, ಮೌಢ್ಯದ ವಿರುದ್ಧ ಪ್ರತಿಭಟನಾರ್ಥವಾಗಿ ಕಪ್ಪು ಅಂಗಿ ಧರಿಸುವಂತೆ ಪೆರಿಯಾರ್ ಅವರು 1945ರಲ್ಲಿ ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದರು ಎಂದು ‘ಮಾತೃಭೂಮಿ’ ವರದಿ ಮಾಡಿತ್ತು. ಸುಮಾರು 60 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ (ಎಐಎಡಿಎಂಕೆ) ಪಕ್ಷಗಳಿಗೆ ಪರ್ಯಾರವೆಂಬಂತೆ ತಮ್ಮ ಪಕ್ಷವನ್ನು ಬಿಂಬಿಸಲು ವಿಜಯ್ ಇಂತಹ ಪ್ರಯತ್ನ ಮಾಡಿರಬಹುದು. ಟಿವಿಕೆಯು ದ್ರಾವಿಡ ಸಿದ್ಧಾಂತಗಳಿಗೆ ಬದ್ಧವಾಗಿ ಇರಲಿದೆ ಎಂಬುದನ್ನು ಅವರು ಈ ರೀತಿ ಸಾರಲು ಯತ್ನಿಸಿರಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದರು.