ಚಂದ್ರಯಾನ–3ಕ್ಕೆ ಅಮೆರಿಕದ ಪ್ರತಿಷ್ಠಿತ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ
ವಾಷಿಂಗ್ಟನ್: ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ-3’ ಮಿಷನ್‌ಗೆ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ (ಎಐಎಎ) ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ‘ಗಾಡಾರ್ಡ್ ಆಸ್ಟ್ರೋನಾಟಿಕ್ಸ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗುರುವಾರ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪರವಾಗಿ ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಪ್ರಶಸ್ತಿ ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ‘ಬಾಹ್ಯಾಕಾಶ ದೃಷ್ಟಿಕೋನ 2047’ ಅನ್ನು ವಿವರಿಸಿದರು. ಬಾಹ್ಯಾಕಾಶ ಸಂಶೋಧನೆ, ಮಾನವ ಬಾಹ್ಯಾಕಾಶಯಾನ ಮತ್ತು ಭಾರತದ ವಾಣಿಜ್ಯ ಬಾಹ್ಯಾಕಾಶ ವಲಯದ ಕ್ಷಿಪ್ರ ಬೆಳವಣಿಗೆಯ ಕುರಿತಾದ ಮಾರ್ಗಸೂಚಿ ಬಗ್ಗೆಯೂ ಗಮನ ಸೆಳೆದರು. 2023ರ ಆಗಸ್ಟ್ 23ರಂದು ‘ಚಂದ್ರಯಾನ-3’ ಮಿಷನ್ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ವಿಶ್ವದ ಮೊದಲ ಬಾಹ್ಯಾಕಾಶ ನೌಕೆ ಎಂಬ ಇತಿಹಾಸ ಸೃಷ್ಟಿಸಿತ್ತು. ಈ ಪ್ರದೇಶವು ವೈಜ್ಞಾನಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ ಹೊಂದಿದೆ. ಜತೆಗೆ, ‘ಚಂದ್ರಯಾನ-3’ ಮಿಷನ್ ಭಾರತದ ಬಾಹ್ಯಾಕಾಶ ಸಂಶೋಧನಾ ಸಾಮರ್ಥ್ಯಕ್ಕೆ ಸಾಕ್ಷಿಯೆನಿಸಿತು.
ಈ ಮಿಷನ್ ಭವಿಷ್ಯದ ಮಾನವ–ಚಂದ್ರನ ಕಾರ್ಯಾಚರಣೆಗಳಿಗೆ ಬೆಂಬಲ ನೀಡಲು ಅಗತ್ಯವಾದ ನಿರ್ಣಾಯಕ ಡೇಟಾವನ್ನು ಒದಗಿಸಿದೆ. ಅಲ್ಲದೆ, ಚಂದ್ರನ ದಕ್ಷಿಣ ಧ್ರುವದ ಮಣ್ಣಿನಲ್ಲಿ ರಾಸಾಯನಿಕ ಧಾತುಗಳು ಇರುವುದನ್ನು ದೃಢಪಡಿಸಿದೆ. ಇದು ಭವಿಷ್ಯದಲ್ಲಿ ಚಂದ್ರನ ಮೇಲ್ಮೈನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕವಾಗಬಲ್ಲ ಸ್ಥಳೀಯ ಸಂಪನ್ಮೂಲ ಲಭ್ಯತೆಯನ್ನು ಸೂಚಿಸುತ್ತದೆ. ಏನಿದು ಗಾಡಾರ್ಡ್ ಆಸ್ಟ್ರೋನಾಟಿಕ್ಸ್ ಪ್ರಶಸ್ತಿ? ಗಾಡಾರ್ಡ್ ಆಸ್ಟ್ರೋನಾಟಿಕ್ಸ್ ಪ್ರಶಸ್ತಿಯು ಬಾಹ್ಯಾಕಾಶ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಗಾಗಿ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಅಂಡ್ ಆಸ್ಟ್ರೋನಾಟಿಕ್ಸ್ (ಎಐಎಎ) ವತಿಯಿಂದ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.