BCCI: ಅಫ್ಘಾನ್ ಸರಣಿಗೆ ತಂಡ ಪ್ರಕಟ: ರಾಹುಲ್ ಉಪನಾಯಕ, ಹಲವು ಹೊಸಬರಿಗೆ ಅವಕಾಶ
ಗುವಾಹಟಿ: ಐಪಿಎಲ್ ಮುಗಿದೊಡನೆ ಆರಂಭವಾಗುವ ಅಫ್ಘಾನಿಸ್ತಾನ ವಿರುದ್ದ ಒಂದು ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದೆ. ಗುವಾಹಟಿಯಲ್ಲಿ ಸಭೆ ಸೇರಿದ್ದ ಆಯ್ಕೆ ಸಮಿತಿ, ಎರಡೂ ತಂಡಗಳನ್ನು ಆಯ್ಕೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಫಾರ್ಮ್ ನಲ್ಲಿರದ ರಿಷಭ್ ಪಂತ್ ಅವರು ಟೆಸ್ಟ್ ಉಪ ನಾಯಕತ್ವ ಕಳೆದುಕೊಂಡಿದ್ದಾರೆ. ಅವರ ಬದಲಿಗೆ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಬುಮ್ರಾ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಲಾಗಿದೆ . ಟೆಸ್ಟ್ ತಂಡದಲ್ಲಿ ಸಿರಾಜ್ ಮತ್ತು ಪ್ರಸಿಧ್ ಕೃಷ್ಣ ಪ್ರಮುಖ ವೇಗಿಗಳಾಗಿದ್ದಾರೆ. ದೇಶೀಯ ಕ್ರಿಕೆಟ್ ನ ಪ್ರದರ್ಶನ ಪರಿಗಣಿಸಿ ಮಾನವ್ ಸುತಾರ್, ಗುರ್ನೂರ್ ಬ್ರರ್ ಮತ್ತು ಹರ್ಷ್ ದುಬೆ ಅವರನ್ನು ಟೆಸ್ಟ್ ತಂಡಕ್ಕೆ ಕರೆಸಲಾಗಿದೆ.
ಏಕದಿನ ತಂಡಕ್ಕೂ ಹೊಸಬರ ಆಯ್ಕೆ ಮಾಡಲಾಗಿದೆ. ರವೀಂದ್ರ ಜಡೇಜಾ ಏಕದಿನ ತಂಡದಲ್ಲೂ ಸ್ಥಾನ ಪಡೆದಿಲ್ಲ. ಲಕ್ನೋ ತಂಡದ ವೇಗಿ ಪ್ರಿನ್ಸ್ ಯಾದವ್ ಅವರಿಗೆ ಮೊದಲ ಬಾರಿ ಅವಕಾಶ ನೀಡಲಾಗಿದೆ. ಅಲ್ಲದೆ ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ರೋಹಿತ್ ಮತ್ತು ಹಾರ್ದಿಕ್ ಅವರ ಲಭ್ಯತೆಯು ಫಿಟ್ನೆಟ್ ಗೆ ಒಳಪಟ್ಟಿರುತ್ತದೆ. ಏಕದಿನ ತಂಡದಿಂದ ಪಂತ್ ರನ್ನು ಕೈಬಿಡಲಾಗಿದೆ. ಅಫ್ಘಾನ್ ವಿರುದ್ದದ ಏಕೈಕ ಟೆಸ್ಟ್ ಪಂದ್ಯವು ಜೂನ್ 6ರಿಂದ ನಡೆಯಲಿದೆ. ಈ ಪಂದ್ಯ ನ್ಯೂಚಂಡೀಗಢದಲ್ಲಿ ನಡೆಯಲಿದೆ. ಮೂರು ಏಕದಿನ ಪಂದ್ಯಗಳು ಜೂ.14, 17 ಮತ್ತು 20ರಂದು ನಡೆಯಲಿದೆ.
ಈ ಪಂದ್ಯಗಳು ಕ್ರಮವಾಗಿ ಧರ್ಮಶಾಲಾ, ಲಕ್ನೋ ಮತ್ತು ಚೆನ್ನೈನಲ್ಲಿ ನಡೆಯಲಿದೆ. ಟೆಸ್ಟ್ ತಂಡ: ಶುಭಮನ್ ಗಿಲ್ (ನಾ), ಜೈಸ್ವಾಲ್, ಕೆಎಲ್ ರಾಹುಲ್ (ಉ.ನಾ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ತ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರರ್, ಹರ್ಷ್ ದುಬೆ, ಧ್ರುವ ಜುರೆಲ್. ಏಕದಿನ ತಂಡ: ಶುಭಮನ್ ಗಿಲ್ (ನಾ), ರೋಹಿತ್ ಶರ್ಮಾ*, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ*, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಪ್ರಸಿಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ