Mumbai Indians: ಐಪಿಎಲ್ ನಿಂದ ಹೊರಬಿದ್ದ ಕ್ವಿಂಟನ್ ಡಿಕಾಕ್, ರಾಜ್ ಅಂಗದ್ ಬಾವಾ
ಮುಂಬೈ: ಈಗಾಗಲೇ ಐಪಿಎಲ್ 2026ರ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ಆಟಗಾರರು ಗಾಯದ ಕಾರಣದಿಂದ ಐಪಿಎಲ್ ನ ಉಳಿದ ಭಾಗದಿಂದ ಹೊರಬಿದ್ದಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಮತ್ತು ಆಲ್ ರೌಂಡರ್ ರಾಜ್ ಅಂಗದ್ ಬಾವ ಗಾಯಗೊಂಡು, ಕೂಟದಿಂದ ಹೊರಬಿದ್ದಿದ್ದಾರೆ. ಮುಂಬೈ ಇಂಡಿಯನ್ಸ್ ಇನ್ನು ಎರಡು ಪಂದ್ಯಗಳನ್ನು ಆಡಲಿದ್ದು, ಈ ಇಬ್ಬರು ಆಟಗಾರರು ಆಡಲಿಳಿಯುದಿಲ್ಲ. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಡಿ ಕಾಕ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂಬೈ ಪಂದ್ಯಕ್ಕೂ ಮುನ್ನ ಎಡಗೈ ಮಣಿಕಟ್ಟಿನಲ್ಲಿ ಸ್ನಾಯುರಜ್ಜು ಗಾಯದಿಂದ ಬಳಲುತ್ತಿದ್ದರು.
ಪಂಜಾಬ್ ಕಿಂಗ್ಸ್ ವಿರುದ್ಧದ ಹಿಂದಿನ ಪಂದ್ಯದ ವೇಳೆ ಚಂಡೀಗಢ ಆಲ್‌ರೌಂಡರ್ ರಾಜ್ ಅಂಗದ್ ಬಾವಾ ಅವರ ಬಲಗೈ ಹೆಬ್ಬೆರಳಿನ ಲಿಗಮೆಂಟ್ ಟಿಯರ್ ಆಗಿತ್ತು. ಇಬ್ಬರೂ ಆಟಗಾರರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ತಮ್ಮ ತಮ್ಮ ಮನೆಗಳಲ್ಲಿದ್ದಾರೆ. ಐಪಿಎಲ್ ನಿಯಮಾವಳಿಗಳ ಪ್ರಕಾರ, ಈ ಇಬ್ಬರು ಆಟಗಾರರ ಬದಲಿ ಆಟಗಾರರನ್ನು ನೇಮಿಸಲಾಗುವುದು ಎಂದು ಮುಂಬೈ ಇಂಡಿಯನ್ಸ್ ಹೇಳಿದೆ. ಮುಂಬೈ ತಂಡವು 12 ಪಂದ್ಯಗಳಲ್ಲಿ ನಾಲ್ಕು ಗೆಲುವುಗಳು ಮತ್ತು -0.504 ರ ನೆಟದ ರನ್-ರೇಟ್‌ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಅವರಿಗೆ ಎರಡು ಪಂದ್ಯಗಳು ಉಳಿದಿವೆ: ಬುಧವಾರ (ಮೇ 20) ಕೋಲ್ಕತ್ತಾದಲ್ಲಿ ಕೆಕೆಆರ್ ವಿರುದ್ಧ ಮತ್ತು ಭಾನುವಾರ (ಮೇ 24) ಮುಂಬೈನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.