Select Location
All Locations
State
Region
City / District
ಬಾಗಲಕೋಟೆ ಉಪಚುನಾವಣೆ: ಯತ್ನಾಳರ ಮರು ಸೇರ್ಪಡೆ ನಿರ್ಧರಿಸಲಿದೆಯಾ ಫಲಿತಾಂಶ ?

ಬಾಗಲಕೋಟೆ ಉಪಚುನಾವಣೆ: ಯತ್ನಾಳರ ಮರು ಸೇರ್ಪಡೆ ನಿರ್ಧರಿಸಲಿದೆಯಾ ಫಲಿತಾಂಶ ?

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಬಿಜೆಪಿಯಷ್ಟೇ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೂ ಮುಖ್ಯವಾಗಿದೆ. ವಿಜಯಪುರ ನಗರ ಶಾಸಕರಿಗೂ, ಬಾಗಲಕೋಟೆ ವಿಧಾನಸಭಾ ಚುನಾವಣೆಗೂ ಏನು ಸಂಬಂಧ ಎನ್ನುವಂತಿಲ್ಲ. ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಯತ್ನಾಳರು ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಪ್ರಚಾರ ಮಾಡಿದ್ದಾರೆ. ಯತ್ನಾಳರ ಬಿಜೆಪಿ ಮರು ಪ್ರವೇಶಕ್ಕೆ ಫಲಿತಾಂಶ ನಾಂದಿ ಹಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಗೆಲುವು, ಮುಂದಿನ ರಾಜಕೀಯದ ಅವರ ಹಾದಿಯನ್ನು ಸುಗಮಗೊಳಿಸಲಿದೆ. ಕಾಂಗ್ರೆಸ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಬಿಜೆಪಿ ಗೆದ್ದರೆ, ತಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಿರುವ ನಾಯಕರಿಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉತ್ತರ ನೀಡಲು ಅಸ್ತ್ರವಾಗಲಿದೆ.

ಆರ್‌ಎಸ್‌ಎಸ್‌, ಹಿಂದುತ್ವದ ಗಟ್ಟಿ ನೆಲೆ ಹೊಂದಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತಗಳನ್ನು ಸೆಳೆಯಲು ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಕರೆಯಿಸಬೇಕು ಎಂಬುದು ಕಾರ್ಯಕರ್ತರು, ಕೆಲ ಮುಖಂಡರ ವಾದವಾಗಿತ್ತು. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬೈದಾಡಿಕೊಂಡೇ ತಿರುಗಾಡುವ ಅವರನ್ನು ಕರೆಯಿಸುವುದು ಹೇಗೆ ಎಂಬ ಪ್ರಶ್ನೆ ನಾಯಕರದ್ದಾಗಿತ್ತು.

ಚುನಾವಣಾ ಕಣ ರಂಗೇರಿದ ಬಳಿಕ ಕಾಂಗ್ರೆಸ್‌ ನಾಯಕರ ಭರ್ಜರಿ ಪ್ರಚಾರ ಆರಂಭವಾದ ಮೇಲೆ ಯತ್ನಾಳರನ್ನು ಕರೆಯಿಸಬೇಕು ಎಂಬ ಒತ್ತಡ ಹೆಚ್ಚಾಗಿತ್ತು. ಸ್ಥಳೀಯ ನಾಯಕರು ಕೊನೆಗೂ ರಾಜ್ಯ ಘಟಕದ ಅಧ್ಯಕ್ಷರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಚಾರಕ್ಕೆ ಬಂದಿದ್ದ ಯತ್ನಾಳ ಮಾಧ್ಯಮದವರೊಂದಿಗೆ ಮಾತನಾಡುವಾಗ ಮರಳಿ ಬಿಜೆಪಿಗೆ ಬರುವ ಕುರಿತು ಪ್ರತಿಕ್ರಿಯಿಸಿದ್ದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಗೆಲುವು ಸಾಧಿಸಿದ ಮೇಲೆ ಇಲ್ಲಿರುವ ನಾಯಕರು (ಸಿ.ಸಿ. ಪಾಟೀಲ, ಅರವಿಂದ ಬೆಲ್ಲದ, ಸಿದ್ದು ಸವದಿ) ನಾಯಕರ ಬಳಿ ಬಿಜೆಪಿಗೆ ಯತ್ನಾಳ ಅವರನ್ನು ಕರೆಯಿಸಿಕೊಳ್ಳಬೇಕು ಎಂದು ಹೇಳಿದ್ದಾರೆ’ ಎಂದಿದ್ದರು. ಇದೇ ಸಂದರ್ಭದಲ್ಲಿ ನಡೆದಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಯತ್ನಾಳ ಅವರನ್ನು ಪ್ರಚಾರಕ್ಕೆ ಆಹ್ವಾನಿಸಿರಲಿಲ್ಲ. ಬಾಗಲಕೋಟೆಯಲ್ಲಿ ಬಿಜೆಪಿಗೆ ಗೆಲುವು ಸಿಕ್ಕರೆ ಶಾಸಕ ಯತ್ನಾಳ ಅವರು, ಗೆಲುವಿನಲ್ಲಿ ತಮ್ಮ ಪಾಲೂ ಇದೆ ಎಂಬುದನ್ನು ಖಂಡಿತವಾಗಿಯೂ ಪ್ರತಿಪಾದಿಸಲಿದ್ದಾರೆ. 

ಪ್ರಚಾರಕ್ಕೆ ಕರೆಯಿಸಬೇಕು ಎಂದಿದ್ದ ನಾಯಕರೂ ಇದನ್ನು ನಂಬುತ್ತಾರೆ. ಪರಿಣಾಮ ಯತ್ನಾಳ ಅವರನ್ನು ಮರಳಿ ಬಿಜೆಪಿಗೆ ಕರೆ ತರಬೇಕು ಎನ್ನುವ ಒತ್ತಡ ಹೆಚ್ಚಾಗಲಿದೆ. ಶಾಸಕ ಯತ್ನಾಳ ಅವರಿಗೆ ಹತ್ತಿರವಾಗಿರುವ ಮಾಜಿ ಸಂಸದ ಪ್ರತಾಪ ಸಿಂಹ, ಅರವಿಂದ ಲಿಂಬಾವಳಿ ಅವರೂ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರೂ ಸಹ ಯತ್ನಾಳ ಪರವಾಗಿ ಬ್ಯಾಟಿಂಗ್‌ ಮಾಡಲಿದ್ದಾರೆ. ಬಿಜೆಪಿಗೆ ಸೋಲಾದರೆ, ಶಾಸಕ ಯತ್ನಾಳ ಅವರ ಬಿಜೆಪಿ ಮರು ಪ್ರವೇಶದ ಹಾದಿ ಕಠಿಣವಾಗಲಿದೆ. ಯತ್ನಾಳ ಅನಿವಾರ್ಯ ಎಂದು ಪ್ರತಿಪಾಸಿದ್ದ ನಾಯಕರಿಗೂ ಹಿನ್ನಡೆಯಾಗಲಿದೆ. ಇದನ್ನೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಯತ್ನಾಳ ಮರು ಸೇರ್ಪಡೆಗೆ ಅಡ್ಡಿಯಾಗಿಸುವ ಅಸ್ತ್ರವಾಗಿಸಲಿದ್ದಾರೆ ಎಂಬುದು ರಾಜಕೀಯ ನಾಯಕರ ಲೆಕ್ಕಾಚಾರವಾಗಿದೆ.


Prajavani 1 hour ago
Home Flash News